ಹೊಸದಿಗಂತ ವರದಿ,ಚಿತ್ರದುರ್ಗ:
ಮೇಕೆದಾಟು ಯೋಜನೆ ಹೆಸರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾದುವ ಕಾಂಗ್ರೇಸಿಗರು, ಮತ್ತೆ ಹತ್ತು ಕೆ.ಜಿ. ತೂಕ ಕಡಿಮೆ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಬೃಹತ್ ನೀರಾವರಿ ಸಚಿವ ಹಾಗೂ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ವ್ಯಂಗ್ಯವಾಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಹೇಳಿ ಮೋಸ ಮಾಡಿದ್ದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷದ ಈ ರೀತಿಯ ಗಿಮಿಕ್ ನಡೆಯೋದಿಲ್ಲ. ೨೦೧೩ ರಿಂದ ೨೦೧೮ ರವರೆಗಿನ ಕಾಂಗ್ರೆಸ್ ಸರ್ಕಾರದಿಂದ ಹೊಣೆಗೇಡಿತನ. ಮೇಕೆದಾಟು ಯೋಜನೆ ವಿಳಂಬಕ್ಕೆ ಕಾರಣ ಯಾರು? ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಕೇಳಬೇಕು. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೇಳಿದರೆ ಸರಿಯಾದ ಉತ್ತರ ಸಿಗುತ್ತದೆ ಎಂದರು.
ನಾಳೆ ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಯೋಜನೆ ಕೇಸಿನ ವಿಚಾರಣೆ ಇದೆ. ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಮುಗಿದ ಬಳಿಕ ಕಾಂಗ್ರೆಸ್ ಬಂಡವಾಳ ಬಯಲಾಗುತ್ತದೆ. ದಾಖಲೆ ಸಮೇತ ಸ್ಪೋಟಕ ಮಾಹಿತಿ ಹೊರ ಹಾಕುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.