ಬಿಜೆಪಿ ಕದ ತಟ್ಟುತ್ತಿರುವ ಕಾಂಗ್ರೆಸ್ ಮುಖಂಡರು: ರವಿಸುಬ್ರಹ್ಮಣ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ “ಕಾಂಗ್ರೆಸ್ ಮುಕ್ತ ಭಾರತ”ದ ಘೋಷಣೆಯಂತೆ ಶೀಘ್ರವೇ ಕಾಂಗ್ರೆಸ್ ಪಕ್ಷವು ಅತ್ಯಂತ ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಶಾಸಕ ರವಿಸುಬ್ರಹ್ಮಣ್ಯ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮತೀಯ ಓಲೈಕೆಗಾಗಿ ಹಿಂದೂ ಹಬ್ಬಗಳ ಆಚರಣೆಗೆ ಕಾಂಗ್ರೆಸ್ ಅಡ್ಡಿ ಮಾಡುತ್ತಿತ್ತು . ಒಂದು ಕಾಲದಲ್ಲಿ ದೇಶವನ್ನೇ ಆಳುತ್ತಿದ್ದ ಕಾಂಗ್ರೆಸ್ ಪಕ್ಷವು ಈಗ ಇವತ್ತು ಕೇವಲ ಎರಡು ರಾಜ್ಯಗಳಲ್ಲಿ ಸ್ವಂತ ಬಲದಲ್ಲಿ ಆಡಳಿತ ನಡೆಸುತ್ತಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಗುಲಾಂ ನಬಿ ಆಜಾದ್ ಅವರು ಪಕ್ಷ ತೊರೆದು ತಮ್ಮದೇ ಆದ ಚಿಂತನೆಯೊಂದಿಗೆ ಹೊರಕ್ಕೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಕೆಲವರಿಗಷ್ಟೇ ಸೀಮಿತ ಪಕ್ಷವಾಗಿದೆ. ಯಾವುದೋ ಗುಮಾಸ್ತರು ಮತ್ತುಗನ್ ಮ್ಯಾನ್‍ಗಳು ನಡೆಸುವ ಪಕ್ಷ ಅದಾಗಿದೆ ಎಂದೂ ಅವರು ಹೇಳಿದ್ದಾರೆ.
ಕಪಿಲ್ ಸಿಬಲ್, ದಿಗ್ವಿಜಯ್ ಸಿಂಗ್, ಮಣಿಶಂಕರ್ ಅಯ್ಯರ್, ಹಾರ್ದಿಕ್ ಪಟೇಲ್ ಅವರಂಥ ಅನೇಕರು ಪಕ್ಷ ತ್ಯಜಿಸಿದ್ದಾರೆ ಎಂದರು.
ಹಿಂದೆ ಕರ್ನಾಟಕದಲ್ಲೂ 17 ಶಾಸಕರು ಬಿಜೆಪಿಗೆ ಬಂದಿದ್ದರು. ಹಿರಿಯರಾದ ಎಸ್.ಎಂ.ಕೃಷ್ಣ, ಮುಖಂಡ ಪ್ರಮೋದ್ ಮಧ್ವರಾಜ್ ಅವರೂ ಬಿಜೆಪಿ ಸೇರಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಅವರು ಕೆಲವು ವಿಷಯಗಳನ್ನು ಹೊರಗಡೆ ತೋರಿಸದಿದ್ದರೂ ಅಲ್ಲೂ ಪರಿವರ್ತನೆ ಆಗಲಿದೆ. ಮೈಸೂರು- ಮಂಡ್ಯ, ಕಲಬುರ್ಗಿ, ಉತ್ತರ ಕರ್ನಾಟಕದ ಅನೇಕ ಭಾಗಗಳಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ಮತ್ತು ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಪರಿವರ್ತನೆ ಕೆಲವೇ ದಿನಗಳಲ್ಲಿ ಆಗಲಿದೆ ಎಂದು ವಿವರ ನೀಡಿದರು.
ಮುಂದಿನ ದಿನಗಳು ಬಿಜೆಪಿಯ ದಿನಗಳಾಗಿರಲಿವೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಉತ್ತಮ ನಾಯಕತ್ವ ನೀಡುವ ಮೂಲಕ ಜನರ ಆಶೋತ್ತರಕ್ಕೆ ಸ್ಪಂದಿಸುವ ಸರಕಾರಗಳು ಶಾಶ್ವತವಾಗಿ ಇರಲಿವೆ ಎಂದರು.
ಸಾಕಷ್ಟು ದಿನಗಳಿಂದ ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಜಿಜ್ಞಾಸೆ ಇತ್ತು. ಮಾನ್ಯ ನ್ಯಾಯಾಲಯದ ಆದೇಶದನ್ವಯ ನಾಗರಿಕರ ಒತ್ತಾಸೆ ಮೇರೆಗೆ ಇವತ್ತು ಸರಕಾರವು ಆ ಸರಕಾರಿ ಆಟದ ಮೈದಾನದಲ್ಲಿ ಗಣೇಶೋತ್ಸವ ಮಾಡಲು ಅವಕಾಶ ನೀಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಚಾಮರಾಜಪೇಟೆಯಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ಜನರ ಭಾವನೆಗೆ ಬಿಜೆಪಿ ಕೂಡ ಸ್ಪಂದಿಸಿ, ಅತ್ಯಂತ ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಮುಂದಾಗಿದೆ. ಹುಬ್ಬಳ್ಳಿಯಲ್ಲೂ ಮೇಯರ್ ಅವರು ಗಣೇಶೋತ್ಸವ ಆಚರಣೆಗೆ ಸಂಬಂಧಿಸಿ ಸಮಿತಿ ರಚಿಸಿದ್ದಾರೆ. ಅಲ್ಲೂ ಸಮಿತಿಯ ಒಪ್ಪಿಗೆ ಲಭಿಸಲಿದೆ ಎಂದು ನುಡಿದರು.
ದೇಶವನ್ನು ಒಗ್ಗೂಡಿಸುವ ಹಿತದೃಷ್ಟಿಯಿಂದ ತಿಲಕರು ಅವತ್ತು ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿರ್ಧಾರ ತೆಗೆದುಕೊಂಡಿದ್ದರು. ಆ ಮೂಲಕ ದೇಶದ ಜನತೆಯ ಭಾವನೆಗಳು ಒಂದುಗೂಡಬೇಕೆಂಬ ಅಪೇಕ್ಷೆ ಅವರದಾಗಿತ್ತು ಎಂದು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!