ಹೊಸ ದಿಗಂತ ವರದಿ, ಮಂಗಳೂರು:
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಮುನ್ನ ನಗರದ ಕ್ಲಾಕ್ ಟವರ್ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜನಾಕ್ರೋಶ ಜಾಥಾ ನಡೆಯಿತು. ತಲೆ ಮೇಲೆ ಕಟ್ಟಿಗೆ
ಹೊರೆ ಹೊತ್ತುಕೊಂಡು, ರಿಕ್ಷಾವನ್ನು ಹಗ್ಗದ ಮೂಲಕ ಎಳೆಯುತ್ತ, ಎತ್ತಿನ ಗಾಡಿಯಲ್ಲಿ ಮೆರವಣಿಗೆ ಸಾಗುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, ಸ್ವಾತಂತ್ರ್ಯಾನಂತರದ ಇಷ್ಟು ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಎಂದೂ ಬಡವರು, ರೈತರು, ಮಹಿಳೆಯರು, ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡದೆ ಶೋಷಿತರ ಪರವಾಗಿತ್ತು. ಆದರೆ ಈಗ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಜನವಿರೋಧಿ ನಿರ್ಧಾರಗಳನ್ನು ಕೈಗೊಳ್ಳುತ್ತ ಬಡವರು ಬೀದಿಗೆ ಬರುವಂತೆ ಮಾಡಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿಘ್ನ ಸಂತೋಷಿಗಳು. ಬಡವರು ಪಡುವ ಕಷ್ಟ ಕಂಡು ಸಂತೋಷಪಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲೇ ಅತಿ ಹೆಚ್ಚು 2ಎ ಮೀಸಲಾತಿ ಪಡೆದವರು, ಭೂಸುಧಾರಣಾ ಕಾಯ್ದೆಯಿಂದ ಅತಿ ಹೆಚ್ಚು ಜನರು ಪ್ರಯೋಜನ ಪಡೆದದ್ದು, ೯೪ಸಿ ಮೂಲಕ ಅತಿಹೆಚ್ಚು ಹಕ್ಕುಪತ್ರ ಪಡೆದವರು ದ.ಕ. ಜಿಲ್ಲೆಯವರು. ಇದೆಲ್ಲವೂ ಕಾಂಗ್ರೆಸ್ ಸರಕಾರದ ಮೂಲಕ ಸಾಧ್ಯವಾಗಿದ್ದು, ಜನರ ಮೇಲೆ ಅದರ ಋಣ ಇದೆ. ಆದರೆ ಬಿಜೆಪಿ ಸರಕಾರ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದಿದೆಯೇ ಹೊರತು ಯಾವೊಂದೂ ಜನಪರ ಯೋಜನೆ ಮಾಡುತ್ತಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆಏರಿಕೆಗೆ ಹಿಂದಿನ ಸರಕಾರ ಕಾರಣ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಿಂದಿನ ಅವಧಿಯಲ್ಲಿ ೫ ವರ್ಷ ಅಧಿಕಾರ ನಡೆಸಿದವರು ಅವರೇ. ಅವರೇ ಬೆಲೆ ಏರಿಕೆಗೆ ಕಾರಣ ಎಂದು ರೈ ಟೀಕಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬೆಲೆ ಏರಿಕೆ ಮಾಡಿ ಜನರು ತತ್ತರಿಸುವಂತೆ ಮಾಡಿದ್ದೇ ಬಿಜೆಪಿ ಸರ್ಕಾರದ ಸಾಧನೆ. ದೇಶದ ಆಸ್ತಿಯಾಗಿ ಕಾಂಗ್ರೆಸ್ ಕಟ್ಟಿ ಬೆಳೆಸಿ ಲಾಭದಲ್ಲಿರುವ ಸಾರ್ವಜನಿಕ ಸಂಸ್ಥೆಗಳನ್ನೆಲ್ಲ ಮಾರಾಟ ಮಾಡುತ್ತಿದ್ದಾರೆ. ಜನರಿಗೆ ಇದು ಅರ್ಥವಾಗತೊಡಗಿದೆ ಎಂದರು.
ಶಾಸಕ ಯು.ಟಿ. ಖಾದರ್, ಮಾಜಿ ಎಂಪಿ ಬಿ.ಇಬ್ರಾಹಿಂ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮೊಹಿಯುದ್ದೀನ್ ಬಾವ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಾಹುಲ್ ಹಮೀದ್, ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಶಾಲೆಟ್ ಪಿಂಟೊ, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.