ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ವಿಧಾನ ಸಭೆಯಲ್ಲಿ ನಡೆಯುತ್ತಿರುವ ಚರ್ಚೆಗೆ ಬೆಂಬಲ ನೀಡಿ ಎಂದು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿಕೊಂಡರೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ಹಿನ್ನ್ನೆಲೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 12ಕ್ಕೆ ಮುಂದೂಡಿಕೆ ಮಾಡಿದರು.
ಬಜೆಟ್ ಅಧಿವೇಶನದ ಎರಡನೇ ದಿನವಾದ ಇಂದೂ ಕೂಡ ಕಾಂಗ್ರೆಸ್ ಸದಸ್ಯರ ಧರಣಿ ಮುಂದುವರಿದಾಗ ಸಭಾಧ್ಯಕ್ಷರು ಪ್ರತಿಭಟನೆ ಕೈಬಿಟ್ಟು ಚರ್ಚೆಗೆ ಬರುವಂತೆ ಮನವಿ ಮಾಡಿದರು. ಆದರೂ ಕೇಳದ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮುಂದುವರಿಸಿದರು.
ಈ ದೇಶದಲ್ಲಿ ಹಲವು ಮಹತ್ವದ ಕೆಲಸಗಳಿಗೆ ಕರ್ನಾಟಕದಿಂದ ಚಾಲನೆ ದೊರೆತಿದೆ. ಈಗ ಪುನಃ ಅಂತಹ ಮತ್ತೊಂದು ಅವಕಾಶ ಬಂದಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಸಹಕಾರ ಕೊಡಬೇಕು. ಒಂದು ವೇಳೆ ನಿಮ್ಮ ವಿರೋಧವಿದ್ದರೆ ಯಾವ ಕಾರಣಕ್ಕಾಗಿ ನಿಮ್ಮ ವಿರೋಧವಿದೆ ಎಂಬುದನ್ನಾದರೂ ಹೇಳಿ ಎಂದು ಕೇಳಿಕೊಂಡರು.
ಆದರೆ ಸಭಾಧ್ಯಕ್ಷರ ಮಾತನ್ನು ಕಾಂಗ್ರೆಸ್ ಸದಸ್ಯರು ಒಪ್ಪದೆ ತಮ್ಮ ಧರಣಿ ಮುಂದುವರಿಸಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಹಕ್ಕುಗಳನ್ನು ಹರಣ ಮಾಡುತ್ತಿದ್ದಿರಾ, ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಶಾಸಕ ಸಂಗಮೇಶ್ ಅವರ ಅಮಾನತು ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಮತ್ತೆ ಒತ್ತಾಯಿಸಿದರು. ಇದರಿಂದಾಗಿ ವಿಧಾನಸಭೆಯ ಕಲಾಪವನ್ನು ಸೋಮವಾರ ಮಧ್ಯಾಹ್ನ 12ಕ್ಕೆ ಸಭಾಧ್ಯಕ್ಷರು ಮುಂದೂಡಿಕೆ ಮಾಡಿದರು.