ಹೊಸದಿಗಂತ ವರದಿ, ತುಮಕೂರು:
ಏಪ್ರಿಲ್ 15ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಕೋವಿಡ್ ವ್ಯಾಕ್ಸಿನ್ ಅಭಿಯಾನ ಆರಂಭಿಸಲಿರುವುದಾಗಿ ಕಾಂಗ್ರೆಸ್ ಪಕ್ಷದ ವಕ್ತಾರರಾದ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.
ತುರುವೇಕೆರೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆ ಇದೆ. ಸೋಮವಾರ ದವರೆಗೆ ಸಾಕಾಗುವಷ್ಟು ಮಾತ್ರ ವ್ಯಾಕ್ಸಿನ್ ಸಂಗ್ರಹವಿದೆ. ಆರೋಗ್ಯ ಸಚಿವರು ಕೇವಲ ಮಾತನಾಡುವುದನ್ನು ಬಿಟ್ಟು ವ್ಯಾಕ್ಸಿನ್ ಸರಬರಾಜಿನತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಕೇವಲ ಎರಡು ವ್ಯಾಕ್ಸಿನ್ ಗಳನ್ನು ಮಾತ್ರ ಏಕೆ ನಂಬಿದ್ದೀರಾ.ಇತರೆ ಕಂಪನಿಗಳ ವ್ಯಾಕ್ಸಿನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ. 20ವರ್ಷದವರಿಗೂ ವ್ಯಾಕ್ಸಿನ್ ನೀಡಲು ಅವರು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಪರೀಕ್ಷೆ. ಚಿಕಿತ್ಸೆ ಮತ್ತು ವ್ಯಾಕ್ಸಿನ್ ತೆಗೆದುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದಿಂದ ಒಂದು ಅಭಿಯಾನ ರೂಪದಲ್ಲಿ ಮಾಡಲಾಗುತ್ತದೆ ಎಂದರು.ಬಹಳಷ್ಟು ಮಂದಿ ವ್ಯಾಕ್ಸಿನ್ ತೆಗೆದುಕೊಳ್ಳುವುದಕ್ಕೆ ಹೆದರುತ್ತಿದ್ದಾರೆ. ಅಂತಹವರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿಲ್ಲ. ಆ ಕೆಲಸವನ್ನು ಕಾಂಗ್ರೆಸ್ ಪಕ್ಷದಿಂದ ಮಾಡಲಾಗುತ್ತದೆ ಎಂದರು.