ದಲಿತರ ವಿದ್ಯಾರ್ಥಿವೇತನ ಸ್ಥಗಿತದ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಛಲವಾದಿ ನಾರಾಯಣಸ್ವಾಮಿ ಖಂಡನೆ

ಹೊಸದಿಗಂತ ವರದಿ, ಬೆಂಗಳೂರು:
ಎಸ್‍ಸಿ, ಎಸ್‍ಟಿಗಳಿಗೆ ವಿದ್ಯಾರ್ಥಿವೇತನವನ್ನು ತಡೆಹಿಡಿದಿಲ್ಲ. ಈ ಕುರಿತಂತೆ ಯಾವುದೇ ಸರಕಾರಿ ಆದೇಶ ಇಲ್ಲ. ಇದನ್ನು ಯಾರೂ ನಂಬಬಾರದು. ಸ್ಕಾಲರ್‍ಶಿಪ್ ತಡೆ ಹಿಡಿಯುವ ಕಾರ್ಯ ಅಥವಾ ದಲಿತರಿಗೆ ಕೊಡುವ ಸೌಲಭ್ಯಗಳನ್ನು ಸ್ಥಗಿತಗೊಳಿಸುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮತ್ತು ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
2020ರ ನವೆಂಬರ್ 26ರ ಪತ್ರಿಕೆಯೊಂದರ ದೆಹಲಿ ಆವೃತ್ತಿಯಲ್ಲಿ ಬಂದ ವರದಿಯನ್ನು ಆಧರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಈ ವರದಿ ಸತ್ಯಾಂಶದಿಂದ ಕೂಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರದಲ್ಲಿ ತಪ್ಪು ಸಂದೇಶಗಳನ್ನು ಕಾಂಗ್ರೆಸ್ ಪಕ್ಷದ ಕುಮ್ಮಕ್ಕಿನಿಂದ ರವಾನಿಸಲಾಗುತ್ತಿದೆ. ಆದರೆ, ಇದು ಪುರಾವೆ ಇಲ್ಲದ ವಿಷಯ. ಸ್ಪಷ್ಟ ಮಾಹಿತಿ ಇದ್ದರೂ ಕೆಲವರು ರಾಜಕೀಯ ದುರುದ್ದೇಶದಿಂದ ಅಪಪ್ರಚಾರದಲ್ಲಿ ತೊಡಗಿದ್ದು, ಇದು ಖಂಡನಾರ್ಹ ಎಂದು ಅವರು ತಿಳಿಸಿದ್ದಾರೆ.
66 ಲಕ್ಷ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದ ಸ್ಕಾಲರ್‍ಶಿಪ್ ಅನ್ನು ಸ್ಥಗಿತಗೊಳಿಸಲಾಗಿದೆ ಎಂದು ತಪ್ಪು ಮಾಹಿತಿ ಹರಡಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರಕಾರಗಳು ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳಿಗಾಗಿ ವಿಶೇಷ ಅನುದಾನ ನೀಡುತ್ತಿವೆ. ಅಲ್ಲದೆ, ಈ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ರಾಜ್ಯದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿಗೆ 27 ಸಾವಿರ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಎಸ್‍ಟಿ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ಕೊಡಲು ಕರ್ನಾಟಕದಲ್ಲಿ ಪ್ರತ್ಯೇಕ ಇಲಾಖೆಯನ್ನೂ ರಚಿಸಲಾಗಿದೆ. ಕೇಂದ್ರದಲ್ಲಿ ಸಚಿವಸಂಪುಟ ಪುನಾರಚನೆ ವೇಳೆ ಈ ಸಮುದಾಯಗಳಿಗೆ ಆದ್ಯತೆ ಕೊಡಲಾಗಿದೆ. ಬಿಜೆಪಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟಿದೆ. ಕಾಂಗ್ರೆಸ್‍ನವರಿಗೆ ಚಲಾವಣೆಯಲ್ಲಿರಲು ಯಾವುದೇ ವಿಷಯ ಇಲ್ಲದ ಕಾರಣ ಇಂಥ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಎಸ್‍ಸಿ, ಎಸ್‍ಟಿ ಸಮುದಾಯಗಳ ವಿಚಾರದಲ್ಲಿ ಹಿಂದಿನ ಕಾಂಗ್ರೆಸ್ ಸರಕಾರಗಳು ಕಣ್ಣೊರೆಸುವ ತಂತ್ರವನ್ನಷ್ಟೇ ಮಾಡಿದ್ದವು. ಆದರೆ, ಅವರ ಸರ್ವತೋಮುಖ ಅಭಿವೃದ್ಧಿಗೆ ನೈಜ ಕಳಕಳಿಯಿಂದ ವಿವಿಧ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ಜಾರಿಗೊಳಿಸುತ್ತಿವೆ ಎಂದು ಅವರು ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!