ಸಚಿವ ಈಶ್ವರಪ್ಪ ಹೇಳಿಕೆಗೆ ವಿಧಾನಮಂಡಲ ಅಧಿವೇಶನದಲ್ಲಿ ಗದ್ದಲ, ಕೋಲಾಹಲ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ ಅವರ ಕೆಂಪುಕೋಟೆಯಲ್ಲಿ ಭಗವಾಧ್ವಜ ಹೇಳಿಕೆಯ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬಿದ್ದಿವೆ. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿಧಾನ ಪರಿಷತ್ ಮತ್ತು ವಿಧಾನ ಸಭೆಯಲ್ಲಿ ಕೋಲಾಹಲ ಉಂಟಾಗಿದ್ದು, ಅಧಿವೇಶನ ನಾಳೆಗೆ ಮುಂದೂಡಲ್ಪಟ್ಟಿದೆ.

ದಿಲ್ಲಿಯ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜದ ಸ್ಥಳದಲ್ಲಿ ಮುಂದೆ ಭಗವಾಧ್ವಜ ಹಾರಾಡುತ್ತೆ ಎಂದು ಸಚಿವ ಈಶ್ವರಪ್ಪ ಹೇಳಿದ್ದು ರಾಷ್ಟ್ರದ್ರೋಹ; ಈಶ್ವರಪ್ಪ ಈ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದರು. ಶಾಸಕ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಈಶ್ವರಪ್ಪ ಪರಸ್ಪರ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿ, ಏಕವಚನದಲ್ಲೇ ಬೈಯ್ದಾಡಿಕೊಂಡರು. ಆರೋಪ-ಪ್ರತ್ಯಾರೋಪ ತೀವ್ರಗೊಳ್ಳುತ್ತಲೇ ವಿಧಾನಸಭೆ ಕಲಾಪದಲ್ಲಿ ಗದ್ದಲ, ಕೋಲಾಹಲ ಉಂಟಾಯಿತು. ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಈಶ್ವರಪ್ಪ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆಯೇ ಮಾರ್ಷಲ್‌ಗಳು ಆಗಮಿಸಿದರೆ, ವಿಧಾನಸಭಾಧ್ಯಕ್ಷರು ಸದನವನ್ನು ಮುಂದೂಡಿ ಆದೇಶಿಸಿದರು.

ಪರಿಷತ್ತಿನಲ್ಲಿ ಅಹೋರಾತ್ರಿ ಧರಣಿ
ಈಶ್ವರಪ್ಪ ಅವರ ಹೇಳಿಕೆ ವಿರುದ್ಧ ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಕಡೆ ವಿರೋಧ ವ್ಯಕ್ತಪಡಿಸುವಂತೆ ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದರಂತೆ ವಿಧಾನ ಪರಿಷತ್‌ನಲ್ಲಿಯೂ ಗದ್ದಲ ಉಂಟಾಯಿತು. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ವಿರೋಧ ಪಕ್ಷದಿಂದ ಅಹೋರಾತ್ರಿ ಪ್ರತಿಭಟನೆ ಆರಂಭವಾಗಿದ್ದು, ಸಭಾಪತಿ ಅವರು ಪರಿಷತ್ ಅಧಿವೇಶನವನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!