ಕಾಂಗ್ರೆಸ್ ಭಯೋತ್ಪಾದಕತೆಯ ಪರ: ನಳಿನ್‌ ಕುಮಾರ್ ಕಟೀಲ್

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರಿನ ಕುಕ್ಕರ್ ಬಾಂಬ್ ಪ್ರಕರಣವನ್ನು ಭಯೋತ್ಪಾದನಾ ಕೃತ್ಯವಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಂಬಿಸುತ್ತಿದ್ದಾರೆ. ಕೃತ್ಯದ ಆರೋಪಿ ಶಾರೀಕ್ ಹಿನ್ನಲೆ, ದುರಂತ, ಪೊಲೀಸರ ತನಿಖೆ ಆಧಾರದಲ್ಲಿ ಇದೊಂದು ಭಯೋತ್ಪಾದನಾ ಕೃತ್ಯವೆಂದು ಪೊಲೀಸರೇ ಹೇಳಿದ್ದಾರೆ. ಡಿಕೆಶಿ ಹೇಳಿಕೆ ಭಯೋತ್ಪಾದಕರಿಗೆ ಪ್ರೇರಣೆ ನೀಡಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಭಯೋತ್ಪಾದಕತೆಯ ಪರವಾಗಿದೆ. ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಈಗ ದೇಶ ವಿರೋಧಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಪ್ರಾರಂಭವಾಗಿತ್ತು. ಭಯೋತ್ಪಾದನೆಗೆ ಮೂಲ ಪ್ರೇರಣೆಯೇ ಕಾಂಗ್ರೆಸ್. ಭಿಂದ್ರನ್‌ವಾಲೆಯ ಭಯೋತ್ಪಾದನೆಗೆ ಇಂದಿರಾ ಗಾಂಧಿ ಪ್ರೇರಣೆ ನೀಡಿದ್ದರು. ಕಾಶ್ಮೀರದಲ್ಲಿ ಆರಂಭವಾದ ಭಯೋತ್ಪಾದನೆ ಪ್ರತೀ ಊರಿಗೆ ತಲುಪಲು ಕಾಂಗ್ರೆಸ್ ಕಾರಣ. ಕಾಶ್ಮೀರದ ಆರಂಭಗೊಂಡ ಬಾಂಬ್ ಸ್ಪೋಟ ಪ್ರಕರಣ ಯುಪಿಎ ಕಾಲಘಟ್ಟದಲ್ಲಿ ದೆಹಲಿ, ಕೊಯಮತ್ತೂರುನಲ್ಲಿ ನಡೆಯಿತು. ಮುಂಬೈ ದಾಳಿ ರೂವಾರಿ ಕಸಬ್‌ಗೆ ಕಾಂಗ್ರೆಸ್ ಸರ್ಕಾರ ಬಿರಿಯಾನಿ ತಿನ್ನಿಸಿತು. ಉಗ್ರ ಕಸಬ್‌ಗೆ ಅತಿಥಿ ಸತ್ಕಾರ ಮಾಡಿದ್ದು ಕಾಂಗ್ರೆಸ್. ಇದೇ ಮಾನಸಿಕತೆಯನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಶ್ಮೀರದ ಕಾಂಗ್ರೆಸ್ ನಾಯಕ ಭಯೋತ್ಪಾದಕರಿಗೆ ಒಂದು ಕೋಟಿ ರೂ. ಆಫರ್ ನೀಡಿದ್ದಾನೆ. ಪಿಎಫ್‌ಐ ಕ್ರಿಮಿನಲ್‌ಗಳ ಕೇಸ್ ಹಿಂತೆಗೆದು ಕಾಂಗ್ರೆಸ್ ಬಿ ರಿಪೋರ್ಟ್ ಹಾಕಿದೆ. ಶಾರೀಕ್ ಈ ಹಿಂದೆ ಗೋಡೆ ಬರಹ ಬರೆದಾಗ ಅವನ ಪರವಾಗಿ ಕಾಂಗ್ರೆಸ್ ಹೇಳಿಕೆ ನೀಡಿದೆ. ಕಾಂಗ್ರೆಸ್‌ನದ್ದು ಭಯೋತ್ಪಾದನೆಯ ಮಾನಸಿಕತೆಯಾಗಿದೆ. ಮುಂದಕ್ಕೆ ಕಾಂಗ್ರೆಸ್ ಅಕಾರಕ್ಕೆ ಬಂದರೆ ಭಯೋತ್ಪಾದನೆಗೆ ಪ್ರೇರಣೆ ನೀಡಲಿದೆ ಎಂದರು.

ಕಾಂಗ್ರೆಸ್‌ಗೆ ಪೊಲೀಸ್ ಇಲಾಖೆಯ ಬಗ್ಗೆ ಗೌರವ ಇಲ್ಲ, ಭಯೋತ್ಪಾದಕರ ಮೇಲೆ ಪ್ರೀತಿ ಇದೆ. ವೋಟರ್ ಐಡಿ ಹಗರಣ ಮುಚ್ಚುವ ಕೆಲಸ ಈ ಹಿಂದೆ ಕಾಂಗ್ರೆಸ್ ಮಾಡಿದೆ. ಬಿಜೆಪಿ ಗೆ ಪ್ರಕರಣ ಮುಚ್ಚುವ ಅಗತ್ಯತೆ ಇಲ್ಲ. ಕಾಂಗ್ರೆಸ್ ಕಾಲಘಟ್ಟದ ಹಗರಣದ ಪಿಎಸ್‌ಐ ಅಕ್ರಮ ನೇಮಕಾತಿಯ ಕುಳಗಳ ಬಂಧನವಾಗಿದೆ. ಶಿಕ್ಷಕರ ನೇಮಕಾತಿ ಹಗರಣದ ತನಿಖೆ ನಡೆಯುತ್ತಿದೆ. ಇಂತಹ ಯಾವ ಕೆಲಸವನ್ನೂ ಬಿಜೆಪಿ ಮಾಡುವುದಿಲ್ಲ. ವೋಟ್ ಬ್ಯಾಂಕ್‌ಗೆ ಚಿಲ್ಲರೆ ರಾಜಕೀಯ ಮಾಡುವುದು ಕಾಂಗ್ರೆಸ್ ಕೆಲಸ. ಡಿಜೆಹಳ್ಳಿ ಕೆಜೆ ಹಳ್ಳಿ ಗಲಭೆಯ ಹಿಂದ ಕಾಂಗ್ರೆಸ್ ಮೇಯರ್ ಇದ್ದದ್ದು ತನಿಖೆಯಲ್ಲಿ ಗೊತ್ತಾಗಿದೆ. ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್ ಭಯೋತ್ಪಾದನೆಗೆ ಪ್ರೇರಣಾ ಕೇಂದ್ರವಾಗಿದೆ ಎಂದು ಆಪಾದಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!