Thursday, June 1, 2023

Latest Posts

ಆಶ್ವಾಸನೆ ವಿಚಾರದಲ್ಲಿ ಬಣ್ಣ ಬದಲಿಸುವ ಕಾಂಗ್ರೆಸ್: ಸಿ.ಟಿ.ರವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರು: ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಏರಿದ ಒಂದು ದಿನಕ್ಕೇ ತನ್ನ ಆಶ್ವಾಸನೆ ವಿಚಾರದಲ್ಲಿ ಬಣ್ಣ ಬದಲಿಸುತ್ತಿದೆ. ದಿನಗಳು ಕಳೆದಂತೆ ಅದ್ಯಾವ ರೀತಿ ಬಣ್ಣ ಬದಲಿಸಲಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆಕ್ಷೇಪಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನುಡಿದಂತೆ ನಡೆಯಿರಿ ಎಂದು ಕಾಂಗ್ರೆಸ್ ಸರಕಾರವನ್ನು ಆಗ್ರಹಿಸುವುದಾಗಿ ತಿಳಿಸಿದರು.

ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿ ಎಂದು ಕಾಂಗ್ರೆಸ್‍ನವರು ಹೇಳಿದ್ದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹಲವಾರು ಭಾಷಣಗಳಲ್ಲಿ ಎಲ್ಲ ನಿರುದ್ಯೋಗಿ ಯುವಕರಿಗೆ 3 ಸಾವಿರ ಎಂದಿದ್ದರು. ಐಟಿಐ ಆದವರಿಗೆ 1,500 ಎಂದಿದ್ದರು. ಈಗ 2022-23ರಲ್ಲಿ ಪದವಿ ಪಡೆದವರಿಗೆ ಎನ್ನುತ್ತಿದ್ದಾರೆ. ಖಾಸಗಿ ನೌಕರಿ ಮಾಡುತ್ತಿದ್ದರೆ ಭತ್ಯೆ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷವು ಘೋಷಿಸಿದಂತೆ ಪ್ರತಿ ಮನೆಗೆ ಗೃಹಿಣಿಯರಿಗೆ 2 ಸಾವಿರ ನೀಡಲೇಬೇಕು. 200 ಯೂನಿಟ್ ವಿದ್ಯುತ್ ಉಚಿತ ಕೊಡಲೇಬೇಕು. ಮಹಿಳೆಯರಿಗೆ ಬಸ್ ಚಾರ್ಜ್ ಉಚಿತ ಎಂದಿದ್ದೀರಿ; ಅದನ್ನು ಕೊಡಲೇಬೇಕು. ಬಿಪಿಎಲ್ ಕಾರ್ಡ್‍ದಾರರಿಗೆ 10 ಕೆಜಿ ಅಕ್ಕಿ ಕೊಡಲೇಬೇಕು. ಮುಖ್ಯಮಂತ್ರಿಗಳೇ ಹೇಳಿದ ಮೇಲೆ ಯಾರೋ ಬಿಲ್ ಕಲೆಕ್ಟರ್ ಬಂದು ಬಿಲ್ ಕೇಳಿದರೆ, ಆ ಧೈರ್ಯ ಮಾಡಿದರೆ ಅದು ಸಿಎಂ ಆದೇಶಕ್ಕೆ ವಿರುದ್ಧವಾಗುತ್ತದೆ. ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಹುಷಾರ್; ಬಿಲ್ ಮುಖ್ಯಮಂತ್ರಿಗಳಿಗೆ ಕಳಿಸಿ ಎನ್ನಬೇಕು. ಯಾರೂ ವಿದ್ಯುತ್ ಬಿಲ್ ಕಟ್ಟಬಾರದು ಎಂದು ತಿಳಿಸಿದರು.

ಬಿಜೆಪಿ ಆಡಳಿತದ ಅವಧಿಯಲ್ಲಿ ಹಗರಣ ಆಗಿದ್ದರೆ ಅದನ್ನೂ ತನಿಖೆ ನಡೆಸಿ. ಕೆಂಪಣ್ಣ ಆಯೋಗ ಈಗಾಗಲೇ ಕೊಟ್ಟಿರುವ ವರದಿ ಆಧಾರದಲ್ಲಿ ಎಫ್‍ಐಆರ್ ದಾಖಲಿಸಿ. ಯಾರು 8 ಸಾವಿರ ಕೋಟಿ ನಷ್ಟ ಆಗಲು ಹೊಣೆಗಾರರು ಎಂದು ರಾಜ್ಯದ ಜನರಿಗೆ ಗೊತ್ತಾಗಲಿ. ಅಲ್ಲದೆ, ಅವರಿಗೆ ಶಿಕ್ಷೆಯಾಗಲಿ. 8 ಸಾವಿರ ಕೋಟಿ ಹಣ ವಾಪಸ್ ಬರಲಿ ಎಂದು ವಿನಂತಿಸಿದರು.

ನೀವು ಈಗಾಗಲೇ ಹಲವಾರು ಭಾಗ್ಯಗಳನ್ನು ಘೋಷಿಸಿದ್ದೀರಿ. ಹಣಕಾಸಿನ ಸಂಕಷ್ಟ ಇದೆ. 8 ಸಾವಿರ ಕೋಟಿ ಬಂದರೆ ಕೋಟ್ಯಂತರ ಜನರಿಗೆ ನೆರವು ನೀಡಲು ಸಾಧ್ಯವಿದೆ. ತಪ್ಪಿತಸ್ಥರನ್ನು ಜೈಲಿಗೂ ಕಳಿಸಬಹುದು. ನಿಮ್ಮ ಪ್ರಾಮಾಣಿಕತೆಯೂ ಸಾಬೀತಾಗುತ್ತದೆ. 8 ಸಾವಿರ ಕೋಟಿ ವಿಚಾರದಲ್ಲಿ ಮೊದಲು ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಿ ಎಂದು ಕಾಂಗ್ರೆಸ್ಸಿಗರಿಗೆ ವಿನಂತಿ ಮಾಡುವುದಾಗಿ ತಿಳಿಸಿದರು.

ಅವರು ಸಂವಿಧಾನದ ವಿರುದ್ಧ, ಬಲವಂತದ ಮತಾಂತರದ ಪರ, ಗೋಹತ್ಯೆಯ ಪರ ಎಂಬುದು ಸ್ಪಷ್ಟಗೊಳ್ಳಲಿ. ಈಗ ನಾವು ಗೋಹತ್ಯೆ ನಿಷೇಧ ಕಾಯ್ದೆ ತಂದಿದ್ದೇವೆ. ಅವರು ಅದನ್ನು ರದ್ದು ಮಾಡುವುದಾದರೆ ಅದು ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ. ನಾವು ಬಲವಂತದ ಮತಾಂತರದ ವಿರುದ್ಧ ಕಾಯ್ದೆ ತಂದಿದ್ದೇವೆ. ಅದನ್ನು ರದ್ದು ಮಾಡಿದರೆ ಇವರು ಬಲವಂತದ ಮತಾಂತರದ ಪರ ಎಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದರು.

ಎನ್‍ಇಪಿ ಬೇಡವಾದರೆ ಯಾವ ನೀತಿಯಲ್ಲಿ ಶಿಕ್ಷಣ ಕೊಡುತ್ತೀರಿ ಎಂದು ಸ್ಪಷ್ಟವಾಗಬೇಕು. ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!