ಹೊಸ ದಿಗಂತ ವರದಿ, ಹಾವೇರಿ:
ಕಾಂಗ್ರೆಸ್ ತಲೆ ತಲಾಂತರದಿಂದ ಜಾತಿಯ ವಿಷ ಬೀಜ ಬಿತ್ತುವ, ಹಣದ ಮದದಿಂದ ಮೆರೆಯುವ ಮೂಲಕ ಅಧಿಕಾರ ಪಡೆಯುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಗಂಭೀರ ಆಪಾದನೆ ಮಾಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕ ಬಮ್ಮನಕಟ್ಟಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಜನರಲ್ಲಿ ಸೌಹಾರ್ಧತೆಯ ಬಾಲುವೆ, ಬೆಳಕನ್ನು ಬಿತ್ತುವ ಮೂಲಕ ಕಾಂಗ್ರೆಸ್ಸಿನ ಈ ಸಂಸ್ಕೃತಿಗೆ ತಿಲಾಂಜಲಿ ಹಾಕಿದರು. ಕಾಂಗ್ರೆಸ್ ದೇಶದಲ್ಲಿ ಧೂಳಿಪಟವಾಗುವಂತೆ ಮಾಡಿದರು. ಈಗ ಕಾಂಗ್ರೆಸ್ನ ನಾಯಕರನ್ನು ಕಾಂಗ್ರೆಸ್ಸಿಗರೇ ಹುಡುಕುವಂತಹ ಸಂದರ್ಭ ಬಂದೊದಗಿದೆ ಎಂದು ಯಡಿಯೂರಪ್ಪ ಕಾಂಗ್ರೆಸ್ಸಿಗರನ್ನು ಗೇಲಿ ಮಾಡಿದರು.
ಈ ಉಪ ಚುನಾವಣೆಯ ಮತ ಎಣಿಕೆ ಪ್ರಾರಂಭವಾದ ಒಂದು ಗಂಟೆಯಲ್ಲಿ ಕಾಂಗ್ರೆಸ್ಸಿಗರು ಜಾಗಖಾಲಿ ಮಾಡುವಂತೆ ಬಿಜೆಪಿ ಅಭ್ಯರ್ಥಿ ಶೀವರಾಜ ಸಜ್ಜನರ ಅವರಿಗೆ ಮತ ನೀಡುವಂತೆ ವಿನಂತಿಸಿಕೊಂಡರು. ದಿವಂಗತ ಸಿ.ಎಂ.ಉದಾಸಿ ಅವರು ಸದಾ ಅಭಿವೃದ್ಧಿ ಚಿಂತನೆಯನ್ನು ಮಾಡುತ್ತಿದ್ದರು. ಮುಂದಿನ ನೂರು ವರ್ಷಗಳ ಕಾಲಕ್ಕೆ ಆಗುವಷ್ಟು ಕೆಲಸವನ್ನು ಅವರು ಮಾಡಿದ್ದಾರೆ ಎಂದರು.
ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರು ಸಿ.ಎಂ.ಉದಾಸಿ ಅವರು ಹಾಕಿ ಕೊಟ್ಟ ಮಾರ್ಗದಲ್ಲಿನೇ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮನಃಸ್ಥಿತಿ ಹೊಂದಿರುವುದರಿಂದ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡುವಂತೆ ಕೇಲಿಕೊಂಡರು.
ಇಡೀ ಪ್ರಪಂಚವೇ ಪ್ರಧಾನಿ ನರೇಂದ್ರ ಮೋದಿಯವರನ್ನು ಮೆಚ್ಚಿಕೊಂಡಿದೆ ಆದರೆ ಕಾಂಗ್ರೆಸ್ಸಿನವರು ಅವರ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ ಇದು ಅವರಿಗೆ ಶೋಭೆ ತರುವಂತಹುದಲ್ಲ. ಮೋದಿಯವರನ್ನು ಟೀಕಿಸಿದರೆ ನೀವು ದೊಡ್ಡವರಾಗುವುದಿಲ್ಲಿ ಬದಲಿಗೆ ನಿಮ್ಮ ಗೌರವ ಕಡಿಮೆ ಆಗುತ್ತದೆ ಎಂದು ಕಾಂಗ್ರೆಸ್ಸಿಗರಿಗೆ ಕಿವಿ ಮಾತು ಹೇಳಿದರು.
ಬಿಜೆಪಿ ಹಿಂದು. ಮುಸ್ಲೀಮ್ ಹಾಗೂ ಕ್ರಿಶ್ಚಿಯನ್ನರನ್ನು ಸಮಾನವಾಗಿ ಕಾಣುವ ಪಕ್ಷವಾಗಿದೆ. ಎಲ್ಲರಿಗೂ ಸಮಾನವಾಗಿ ಸೌಲತ್ತುಗಳನ್ನು ನೀಡುತ್ತಿದೆ ಬಿಜೆಪಿ. ಎಲ್ಲರೂ ಸ್ವಾಭಿಮಾನದಿಂದ ಬದುಕಬೇಕೆನ್ನುವುದು ಪಕ್ಷದ ಸಿದ್ಧಾಂತವಾಗಿದೆ ಎಂದರು.