ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಒಪ್ಪಿಗೆ: ತಡೆ ಆಜ್ಞೆ ವಾಪಸ್ ಪಡೆದ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಶಾ ಫೌಂಡೇಶನ್ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನಿರ್ಮಾಣವಾಗುತ್ತಿರುವ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಕರ್ನಾಟಕ ಹೈಕೋರ್ಟ್ ಅನುಮತಿ ನೀಡಿದೆ.

ಜನವರಿ 15 ಭಾನುವಾರದಂದು ಉಪರಾಷ್ಟ್ರಪತಿಯವರ ಸಮ್ಮುಖದಲ್ಲಿ ಇಶಾ ಫೌಂಡೇಶನ್ ವತಿಯಿಂದ ಆದಿಯೋಗಿ ಪ್ರತಿಮೆ ಅನಾವರಣ ಮಾಡಬಹುದು ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.

ಈ ಮೂಲಕ ವಿಭಾಗೀಯ ಪೀಠವು ಇಶಾ ಫೌಂಡೇಶನ್ ತನ್ನ ನಿಗದಿತ ಕಾರ್ಯವನ್ನು 15 ಜನವರಿ 2023 ರಂದು ಪೂರ್ವಯೋಜಿತ ರೀತಿಯಲ್ಲಿ ಮುಂದುವರಿಸಲು ಅವಕಾಶ ಮಾಡಿಕೊಟ್ಟಿದೆ.

ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್ ಈ ಹಿಂದೆ ಹೇಳಿದ್ದಂತೆ ಆಶ್ರಮದ ನಿರ್ಮಾಣ ಕಾಮಗಾರಿ ಮುಂದುವರೆದಿದ್ದು ಆಶ್ರಮದಲ್ಲಿ 112 ಅಡಿಗಳ ಆದಿಯೋಗಿ ಮೂರ್ತಿ ಉದ್ಘಾಟನೆಗೆ ಸನ್ನದ್ದಾಗಿದೆ. ಭಾರತದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಗಣ್ಯಾತಿಗಣ್ಯರು ಆಶ್ರಮಕ್ಕೆ ಆಗಮಿಸಿ ಜನವರಿ 15ರಂದು ಸಂಜೆ ಆದಿಯೋಗಿ ಮೂರ್ತಿ ಉದ್ಘಾಟನೆ ಮಾಡಲಿದ್ದಾರೆ.

ಆದ್ರೆ ಮೊನ್ನೆ ಬುಧವಾರ ಚಿಕ್ಕಬಳ್ಳಾಪುರದಲ್ಲಿ ಇಶಾ ಫೌಂಡೇಶನ್​ ವತಿಯಿಂದ ಆದಿಯೋಗಿ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತ್ತು. ಸರ್ಕಾರ ಮತ್ತು ಇಶಾ ಯೋಗ ಕೇಂದ್ರ ಸೇರಿ 16 ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಆದಿಯೋಗಿ ಪ್ರತಿಮೆ ಸ್ಥಾಪನೆ ಸ್ಥಳವು ಪರಿಸರ ಸೂಕ್ಷ್ಮ ವಲಯವಾಗಿದ್ದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಸರಿಯಲ್ಲ ಎಂದು ಅರ್ಜಿದಾರರ ಪರ ವಕೀಲ ಎಂ. ಶಿವಪ್ರಕಾಶ್ ಕೋರ್ಟ್​​ ಮೊರೆಹೋಗಿದ್ದರು.

ಆದಿಯೋಗಿ ಪ್ರತಿಮೆ ಸ್ಥಾಪನೆಗಾಗಿ ಸರ್ಕಾರ ಕಾನೂನುಬಾಹಿರವಾಗಿ ಜಮೀನು ಮಂಜೂರು ಮಾಡಿದೆ. ನಂದಿ ಬೆಟ್ಟಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ವಾದ ಮಂಡಿಸಲಾಗಿದೆ. ಪರಿಸರದ ಮೇಲೆ ಪರಿಣಾಮ ಬೀರಬಹುದೆಂಬುದನ್ನು ಒಪ್ಪಬಹುದು ಎಂದು ಸರ್ಕಾರದ‌ ಅಧಿಸೂಚನೆಯನ್ನು ಪ್ರಶ್ನಿಸಲು ಅವಕಾಶ ನೀಡಿದ ಹೈಕೋರ್ಟ್, ಯಥಾಸ್ಥಿತಿಗೆ ಆದೇಶಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!