ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಅಂಕೋಲಾ:
ಕಳೆದ ಒಂದು ವಾರದಿಂದ ಜಿಲ್ಲಾದ್ಯಂತ ಸುರಿಯುತ್ತಿರುವ ವರ್ಷಧಾರೆ ಶುಕ್ರವಾರವೂ ಮುಂದುವರೆದಿದ್ದು ಹಲವು ಕಡೆಗಳಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಜನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಅಂಕೋಲಾ ತಾಲೂಕಿನ ಭಾವಿಕೇರಿ, ವಂದಿಗೆ, ಕಂತ್ರಿ, ಶಿರೂರು ಸೇರಿದಂತೆ ಹಲವಡೆ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೊಂಡಿದ್ದು ಕೆಲವು ಕಡೆಗಳಲ್ಲಿ ಭತ್ತದ ಸಸಿಗಳು ಕೊಚ್ಚಿ ಹೋಗಿವೆ, ಭಾವಿಕೇರಿಯ ಕೆಲವು ಗದ್ದೆಗಳಲ್ಲಿ ನೀರು ತುಂಬಿ ನಿಂತಿದ್ದು ಇತ್ತೀಚೆಗೆ ಕೋವೀಡ್ ಕಾರಣದಿಂದ ಕಲ್ಲಂಗಡಿ ಬೆಳೆಗೆ ಬೇಡಿಕೆ ಇಲ್ಲದೇ ನಷ್ಟ ಅನುಭವಿಸಿದ್ದ ರೈತರು ಕಂಗಾಲಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆಯಿಂದ ಅಂಕೋಲಾ ತಾಲೂಕಿನಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ಹಲವಡೆ ರಸ್ತೆಗಳು ಜಲಾವೃತ್ತಗೊಂಡವು, ಪಟ್ಟಣದ ಕಂತ್ರಿಯ ಮೂಲಕ ಹರಿದು ಹೋಗುವ ಹಳ್ಳದಲ್ಲಿ ಪ್ರವಾಹದಂತೆ ನೀರು ಹರಿದು ಆತಂಕಕ್ಕೆ ಕಾರಣವಾಯಿತು.
ತಾಲೂಕಿನ ಬೆಳಂಬಾರ ಮುದ್ರಾಣಿ ರಸ್ತೆ, ಪಟ್ಟಣದ ಲಕ್ಷ್ಮೇಶ್ವರ ಐಸ್ ಪ್ಯಾಕ್ಟರಿ ರಸ್ತೆಗಳಲ್ಲಿ ಮಳೆ ನೀರು ರಸ್ತೆಯಲ್ಲಿ ಹೊಳೆಯ ಹಾಗೆ ತುಂಬಿ ಹರಿಯುತ್ತಿರುವುದು ಕಂಡು ಬಂತು.
ಕಾರವಾರ ತಾಲೂಕು ವ್ಯಾಪ್ತಿಯ ಅಮದಳ್ಳಿ, ಮುದಗಾ ನಿರಾಶ್ರಿತರ ಕಾಲನಿಯ ರಸ್ತೆಗಳಲ್ಲಿ ಮಳೆ ನೀರು ತುಂಬಿ ಜನರು ಸಂಚಾರಕ್ಕೆ ಪರದಾಟ ನಡೆಸುವಂತಾಗಿದೆ.
ಮಧ್ಯಾಹ್ನದ ನಂತರ ಮಳೆಯ ತೀವ್ರತೆ ಕಡಿಮಯಾಗಿದ್ದು ಜನರಲ್ಲಿ ನೆಮ್ಮದಿಗೆ ಕಾರಣವಾಗಿದೆ.