ಹೊಸದಿಗಂತ ವರದಿ,ಮಂಗಳೂರು;
ಸಂವಿಧಾನ ಮತ್ತು ಅಂಬೇಡ್ಕರ್ ಹೆಸರು ಕಾಂಗ್ರೆಸ್‌ಗೆ ಅಧಿಕಾರಕ್ಕೇರುವ ಸಾಧನವಾಗಿದೆ. ಆದರೆ, ಈ ಎರಡು ಹೆಸರಿನಿಂದ ಲಾಭ ಪಡೆಯುವ ಕಾಂಗ್ರೆಸ್‌ನ ಸಮಯ ಕಳೆದುಹೋಗಿದ್ದು, ಈಗ ಜನರಿಗೆ ಮೋಸ ಮಾಡಲು ಸಾಧ್ಯವಿಲ್ಲ, ಜನರನ್ನು ಮೋಸ ಮಾಡಲು ನಾವು ಬಿಡುವುದೂ ಇಲ್ಲ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಮಂಗಳೂರು ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶನಿವಾರ ನಡೆದ ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಸಂವಿಧಾನ ಸಭೆಗೆ ಅಂಬೇಡ್ಕರ್ ಅವರು ಆಯ್ಕೆಯಾಗುವುದನ್ನು ಕಾಂಗ್ರೆಸ್ ತಪ್ಪಿಸಿತ್ತು. ಬಳಿಕ ಅವರು ಲೋಕಸಭಾ ಚುನಾವಣೆಗೆ ಸ್ಪರ್ದಿಸಿದ್ದಾಗಲೂ ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಮಾತ್ರವಲ್ಲದೆ, ನೆಹರೂ ಅವರೇ ಅಂಬೇಡ್ಕರ್ ವಿರುದ್ಧ ಪ್ರಚಾರಕ್ಕೆ ಎರಡೆರಡು ಬಾರಿ ಆಗಮಿಸಿದ್ದರು. ಅಂಬೇಡ್ಕರ್ ಅವರು ಮರಣ ಹೊಂದಿದ ಬಳಿಕ ದೆಹಲಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಸಲೂ ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಮತ್ತು ಅಂಬೇಡ್ಕರ್ ನಡುವೆ ಅನೇಕ ಭಿನ್ನಾಭಿಪ್ರಾಯಗಳಿದ್ದವು. ಎಲ್ಲ ಮಹಿಳೆಯರಿಗೆ ಮತದಾನ ಹಕ್ಕು, ಹಿಂದು ಕೋಡ್‌ಬಿಲ್, ದಲಿತ ನ್ಯಾಯ, ಕಾಶ್ಮೀರದಲ್ಲಿ ದೇಶದ ಕಾನೂನು ಜಾರಿಗೊಳಿಸುವ ವಿಚಾರದಲ್ಲಿ ನೆಹರೂ ವಿರೋಧ ಇತ್ತು. ಈ ಭಿನ್ನಾಭಿಪ್ರಾಯದ ಕಾರಣಕ್ಕೆ ಅಂಬೇಡ್ಕರ್ ಅವರಿಗೆ ಕಿರುಕುಳ ನೀಡಿದ್ದರು. ಸಂವಿಧಾನದ ಪ್ರಸ್ತಾವನೆಗೆ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಲು ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ವಿರೋಧಿಸಿದ್ದರು. ಬಳಿಕ ಕಾಂಗ್ರೆಸ್ ಸರಕಾರ ಇವೆರಡು ಪದಗಳನ್ನು ಸಂವಿಧಾನದ ಪ್ರಸ್ತಾವನೆಗೆ ಸೇರಿಸಿದೆ. ಅಧಿಕಾರಕ್ಕಾಗಿ ಇಂದಿರಾ ಗಾಂಧಿ ನ್ಯಾಯಾಂಗದ ವಿರುದ್ಧ ತಿದ್ದುಪಡಿ ಮೂಲಕ ಸಂವಿಧಾನವನ್ನು ಬಳಸಿಕೊಂಡರು. ಈಗ ಅದೇ ಕಾಂಗ್ರೆಸ್ ಮುಖಂಡರು ಸಂವಿಧಾನದ ಪ್ರತಿ ಹಿಡಿದು ಓಡಾಡುತ್ತಿದ್ದಾರೆ ಎಂದರು.
ಸಂವಿಧಾನ ಬದಲಾಯಿಸಿದ್ದು ಯಾರು? ಪುಸ್ತಕದ ಪರಿಚಯ ಮಾಡಿದ ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ವಿಕಾಸ್ ಕುಮಾರ್ ಪಿ. ಅವರು ಬರೆದ ಪುಸ್ತಕದಲ್ಲಿ, 75 ತಿದ್ದುಪಡಿಗಳ ಮೂಲಕ ಕಾಂಗ್ರೆಸ್ ಪಕ್ಷ ಸಂವಿಧಾನವನ್ನು ಹೇಗೆ ಬದಲಾವಣೆ ಮಾಡಿದೆ ಎಂಬುದನ್ನು ವಿವರಿಸಲಾಗಿದೆ. ಮಾಜಿ ಸಚಿವ ಎನ್. ಮಹೇಶ್ ಪುಸ್ತಕಕ್ಕೆ ಮುನ್ನಡಿ ಬರೆದಿದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಬೆನ್ನುಡಿ ಬರೆದಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನವನ್ನು ಇಡೀ ದೇಶಕ್ಕೆ ಅನ್ವಯಿಸಿದ್ದು ಮೋದಿ ಸರಕಾರ. ಆರ್ಟಿಕಲ್ 370 ರದ್ದು ಮೂಲಕ ಅಂಬೇಡ್ಕರ್ ಹಾಗೂ ಶಾಮ ಪ್ರಸಾದ ಮುಖರ್ಜಿ ಅವರ ಆಶಯವನ್ನು ಮೋದಿ ಸಾಕಾರಗೊಳಿಸಿದ್ದಾರೆ. ಅದಕ್ಕೂ ಮುನ್ನ ಕಾಶ್ಮೀರಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುತ್ತಿರಲಿಲ್ಲ ಎಂದು ಉಲ್ಲೇಖಿಸಿದರು.
ಸಂವಿಧಾನದ 38 ಮತ್ತು 39 ನೇ ತಿದ್ದುಪಡಿಗಳ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಬುಡಮೇಲು ಮಾಡಿದ್ದರು. ಈ ತಿದ್ದುಪಡಿಗಳನ್ನು ಮತ್ತೆ ಸರಿಪಡಿಸಿ ಮೂಲ ಸಂವಿಧಾನವನ್ನು ಮತ್ತೆ ಜಾರಿಗೆ ತಂದದ್ದು ತುರ್ತು ಪರಿಸ್ಥಿತಿ ನಂತರ ಬಂದ ಸಮ್ಮಿಶ್ರ ಸರ್ಕಾರ. ತುರ್ತು ಪರಿಸ್ಥಿತಿ ವೇಳೆ ದೇಶ ಎರಡನೇ ಬಾರಿ ಸ್ವಾತಂತ್ರ್ಯ ಕಳೆದುಕೊಂಡಿತ್ತು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿದವರು ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಎಂದರು.
ಪುಸ್ತಕದ ಲೇಖಕ ವಿಕಾಸ್ ಕುಮಾರ್ ಪಿ. ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ 106 ತಿದ್ದುಪಡಿಗಳ ಬಳಿಕ ಅವರ ಆಶಯಕ್ಕೆ ತಕ್ಕಂತೆ ಸಂವಿಧಾನ ಇದೆಯೇ ಎಂಬುದನ್ನು ಅವಲೋಕನ ಮಾಡಬೇಕಿದೆ. ಸಂವಿಧಾನವನ್ನು ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸರಕನ್ನಾಗಿ ಬಳಸಿತ್ತು. ಸಂವಿಧಾನದ 106 ತಿದ್ದುಪಡಿಗಳ ಪೈಕಿ 75ನ್ನು ಕಾಂಗ್ರೆಸ್ ಸರಕಾರ ಮಾಡಿತ್ತು. ಆ ಮೂಲಕ ಅಂಬೇಡ್ಕರ್ ಅವರ ಆಶಯವನ್ನು ದಹನ ಮಾಡಲಾಗಿದೆ. ಬಿಜೆಪಿ ಅಂಬೇಡ್ಕರ್ ಅವರ ಆಶಯಕ್ಕೆ ಪೂರಕವಾಗಿ ತಿದ್ದುಪಡಿಗಳನ್ನು ಮಾಡಿದೆ ಎಂದು ಹೇಳಿದರು.
ಸಂವಿಧಾನದ ಸ್ವರೂಪ ಬದಲಾಯಿಸಿದ್ದು ನೆಹರೂ ಕುಟುಂಬ
ನರೇಟಿವ್‌ಗಳನ್ನು ಸೃಷ್ಟಿ ಮಾಡುವಲ್ಲಿ ಕಾಂಗ್ರೆಸ್ ನಿಪುಣವಾಗಿದೆ. ಅದಕ್ಕಾಗಿ ಅನೇಕ ಗಂಜಿಕೇಂದ್ರಗಳನ್ನು ಕಾಂಗ್ರೆಸ್ ಸರಕಾರ ಸೃಷ್ಟಿಸಿಕೊಂಡಿದೆ. ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೇಯೇ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸುತ್ತಿದ್ದಾರೆ. ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಸೂತ್ರದಾರರ ಪಾತ್ರವನ್ನು ಆರ್‌ಎಸ್‌ಎಸ್ ಸ್ವಯಂಸೇವಕರು ವಹಿಸಿದ್ದರು. ಅಂಬೇಡ್ಕರ್ ಅವರನ್ನು ಗುತ್ತಿಗೆ ಪಡೆದವರಂತೆ ಕಾಂಗ್ರೆಸ್ ಮುಖಂಡರು ಮಾತನಾಡುತ್ತಿದ್ದಾರೆ. ಅಂಬೇಡ್ಕರ್ ದೇಶದ ಎಲ್ಲರಿಗೂ ಸೇರಿದವರು. ನೆಹರೂ, ಇಂದಿರಾ ಗಾಂಧಿ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು. ಅವರಿಗೆ ಅಂಬೇಡ್ಕರ್ ನೆನಪಾಗಲಿಲ್ಲ. ಬಿಜೆಪಿ ಬೆಂಬಲದೊಂದಿಗೆ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲಾಯಿತು. ಸಂವಿಧಾನದ ಸ್ವರೂಪವನ್ನೇ ಬದಲಾಯಿಸಿದ್ದು ನೆಹರೂ ಕುಟುಂಬ ಎಂದು ಬಿ.ಎಲ್. ಸಂತೋಷ್ ವಾಗ್ದಾಳಿ ನಡೆಸಿದರು.
ಸಂಘದ ಪ್ರಾರ್ಥನೆಯಲ್ಲಿ ಅಂಬೇಡ್ಕರ್
ರಾಮ, ಕೃಷ್ಣ, ಶಿವಾಜಿ, ಸಮರ್ಥ ರಾಮದಾಸರಂತೆ ಡಾ. ಅಂಬೇಡ್ಕರ್ ಅವರೂ ಈ ದೇಶಕ್ಕೆ ಮೌಲ್ಯಗಳನ್ನು ನೀಡಿದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರು ಪ್ರತಿದಿನ ಬೆಳಗ್ಗಿನ ಪ್ರಾರ್ಥನೆಯಲ್ಲಿ ಅಂಬೇಡ್ಕರ್ ಅವರ ಹೆಸರನ್ನು ಪಠಿಸುತ್ತಾರೆ. ಆದರೆ, ಈಗ ಅಂಬೇಡ್ಕರ್ ಹೆಸರು ಹೇಳುವ ಕಾಂಗ್ರೆಸ್ ಅಂಬೇಡ್ಕರ್ ಅವರು ಬದುಕಿದ್ದಾಗ ಹಾಗೂ ಮರಣ ಹೊಂದಿದ ಮೇಲೂ ಅವರಿಗೆ ಗೌರವ ನೀಡಿರಲಿಲ್ಲ. ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪಂಚತೀರ್ಥ ಹೆಸರಿನಲ್ಲಿ ಅಭಿವೃದ್ಧಿಗೊಳಿಸಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ. ನರೇಂದ್ರ ಮೋದಿ ಅವಧಿಯಲ್ಲಿ ಸಂವಿಧಾನ ತಿದ್ದುಪಡಿ ಆಗಿದ್ದು ಕೇವಲ 8 ಬಾರಿ. ಅದರಲ್ಲಿ ಒಂದೇ ಒಂದು ತಿದ್ದುಪಡಿಯನ್ನು ದುರುಪಯೋಗ ಮಾಡಿದ್ದರೆ ಹೇಳಲಿ ಎಂದು ಬಿ.ಎಲ್. ಸಂತೋಷ್ ಹೇಳಿದರು.
ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಭಾಗ ಮುಖ್ಯಸ್ಥ ಡಾ. ಹೃಷಿಕೇಷ್ ಅಮೀನ್ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಸನ್ಮಾನ ಅಭಿಯಾನದ ಜಿಲ್ಲಾ ಸಂಚಾಲಕ ಪ್ರೇಮಾನಂದ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸಹಸಂಚಾಲಕ ವಿನಯ್ ನೇತ್ರ ದಡ್ಡಲಕಾಡು ವಂದಿಸಿದರು.