Saturday, June 10, 2023

Latest Posts

ಬಿಜೆಪಿ ಆಡಳಿತದಲ್ಲಿ ಮಂಜೂರಾದ ಕಾಮಗಾರಿ ಮುಂದುವರಿಸಿ: ಕಾಂಗ್ರೆಸ್ ಗೆ ಮಾಜಿ ಶಾಸಕಿ ರೂಪಾಲಿ ಆಗ್ರಹ

ಹೊಸದಿಗಂತ ವರದಿ,ಕಾರವಾರ:

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಹಾಗೂ ಆರಂಭವಾದ ಕಾಮಗಾರಿಗಳನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿರುವುದು ಜನವಿರೋಧಿ ನೀತಿಯಾಗಿದೆ. ಕೂಡಲೇ ಆ ಕಾಮಗಾರಿಗಳನ್ನು ಮುಂದುವರಿಸಬೇಕು ಎಂದು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕಾಮಗಾರಿಗಳಿಗೆಲ್ಲ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಂಜೂರು ಮಾಡಿದ ಕಾಮಗಾರಿಗಳಾಗಿವೆ. ಇದಲ್ಲದೆ, ಎಲ್ಲ ಯೋಜನೆ, ಕಾಮಗಾರಿಗಳಿಗೆ ಕಾನೂನುಬದ್ಧವಾಗಿ ಅನುಮೋದನೆ ಪಡೆದೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಏಕಾಏಕಿ ಎಲ್ಲ ಕಾಮಗಾರಿಗಳಿಗೆ ತಡೆ ನೀಡಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸಿದಂತಾಗಿದೆ.

ಈಗಾಗಲೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿಗೆ ಹಿನ್ನಡೆಯಾಗಿದೆ. ಸದ್ಯದಲ್ಲೇ ಮಳೆಗಾಲ ಆರಂಭವಾಗಿ ಕಾಮಗಾರಿಗಳನ್ನು ನಡೆಸಲು ಕಷ್ಟಕರವಾಗಲಿದೆ. ಅದರಲ್ಲೂ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ವ್ಯಾಪಕ ಮಳೆಯಾಗುವುದರಿಂದ ಆದಷ್ಟು ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರೈಸಬೇಕಾಗಿದೆ.

ಸಾರ್ವಜನಿಕ ಹಿತಾಸಕ್ತಿಯ ಕಾಮಗಾರಿಗಳನ್ನು ತಡೆಹಿಡಿದಿರುವುದು ಜನವಿರೋಧಿ ನೀತಿಯಾಗಿರುವುದಷ್ಟೇ ಅಲ್ಲ, ಇದೊಂದು ಸೇಡಿನಕ್ರಮವಾಗಿದೆ ಎಂದೂ ಅಭಿಪ್ರಾಯಪಟ್ಟಿರುವ ರೂಪಾಲಿ ಎಸ್.ನಾಯ್ಕ, ಜನಹಿತದ ದೃಷ್ಟಿಯಿಂದ ಮಂಜೂರಾದ ಹಾಗೂ ಆರಂಭವಾಗಿರುವ ಎಲ್ಲ ಕಾಮಗಾರಿಗಳನ್ನು ಮುಂದುವರಿಸಲು ಆದೇಶ ನೀಡುವಂತೆಯೂ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!