Tuesday, July 5, 2022

Latest Posts

ಮುಂದುವರಿದ ಹುಲಿ ದಾಳಿ: ಬೃಹತ್ ಪ್ರತಿಭಟನೆಗೆ ಚಿಂತನೆ, ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ

ಹೊಸದಿಗಂತ ವರದಿ, ಪೊನ್ನಂಪೇಟೆ:

ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ಆರಂಭಗೊಂಡಿರುವ ಹುಲಿ ಸೇರಿದಂತೆ ವನ್ಯಜೀವಿಗಳ ಹಾವಳಿ ನಿರಂತರವಾಗಿ ಮುಂದುವರೆಯುತ್ತಿದ್ದು, ಈ ಕುರಿತು ಎಷ್ಟೇ ಜನಾಕ್ರೋಶ ವ್ಯಕ್ತಗೊಂಡರೂ ಅರಣ್ಯ ಇಲಾಖೆ ಮತ್ತು ಸರಕಾರ ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಜಿ. ಪಂ. ಸದಸ್ಯ ಬಿ.ಎನ್. ಪ್ರಥ್ಯು ಆರೋಪಿಸಿದ್ದಾರೆ.

ಅಲ್ಲದೆ ಜನರನ್ನು ತೀವ್ರವಾಗಿ ಕಾಡುತ್ತಿರುವ ವನ್ಯಜೀವಿಗಳ ನಿರಂತರ ಹಾವಳಿಯ ವಿರುದ್ಧ ಸರಕಾರದ ವಿಶೇಷ ಗಮನ ಸೆಳೆಯಲು ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸುವ ಕುರಿತು ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಕೊಡಗನ್ನು ಸಂಪೂರ್ಣವಾಗಿ ಅರಣ್ಯೀಕರಣ ಮಾಡುವ ಹುನ್ನಾರದಿಂದ ಅರಣ್ಯ ಇಲಾಖೆ ಜಿಲ್ಲೆಯ ಜನರ ಹಿತವನ್ನೇ ಮರೆತಿದೆ. ಸರಕಾರದ ಗಮನಕ್ಕೂ ಬಾರದಂತೆ ನಡೆಯುತ್ತಿರುವ ಈ ಹುನ್ನಾರದ ಹಿಂದೆ ಇಲಾಖೆಯ ಕೆಲವು ಉನ್ನತಾಧಿಕಾರಿಗಳ ನೇರ ಕೈವಾಡವಿದೆ. ‘ಕೊಡಗಿನ ಜನರು ಸತ್ತರೂ ಪರವಾಗಿಲ್ಲ, ಇಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಮಾತ್ರ  ಉಳಿಯಬೇಕು’ ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆ ಕೊಡಗಿನ ಮುಗ್ಧ ಜನರ ತಾಳ್ಮೆಯನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಪಟಳ ನೀಡುವ ಹುಲಿಯನ್ನು ಹಿಡಿಯುವ ಮತ್ತು ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೇವಲ ಜನರಿಗೆ ಮಂಕುಬೂದಿ ಎರಚುವ ನಾಟಕವಷ್ಟೆ. ಇವರ ಯಾವುದೇ ಕಾರ್ಯಾಚರಣೆ ಇದುವರೆಗೂ ಕಿಂಚಿತ್ತೂ ಫಲ ನೀಡಿಲ್ಲ. ಇದಕ್ಕಾಗಿ   ಜನರ ತೆರಿಗೆಯ ಲಕ್ಷಾಂತರ ರೂ.ಗಳನ್ನು ಅರಣ್ಯ ಇಲಾಖೆ ಪೋಲು ಮಾಡುತ್ತಿದೆ. ಅರಣ್ಯದಲ್ಲಿ ವನ್ಯಜೀವಿಗಳ ನಿರ್ವಹಣೆಯನ್ನು ಸರಿಯಾಗಿ ಮಾಡದ ಇಲಾಖೆ ಕೇವಲ ನಿರ್ವಹಣೆಯ ನೆಪದಲ್ಲೂ  ವಾರ್ಷಿಕವಾಗಿ ಕೋಟ್ಯಂತರ ಮೊತ್ತದ ಹಣವನ್ನು ಲೂಟಿ ಮಾಡುತ್ತಿದೆ. ಕೆಲವೊಮ್ಮೆ ಸರಕಾರದಲ್ಲಿರುವ ಮಂತ್ರಿಗಳ ಮತ್ತು ಜನಪ್ರತಿನಿಧಿಗಳ ಸೂಚನೆಗಳಿಗೂ ಕೂಡ ಅರಣ್ಯ ಇಲಾಖೆ ಬೆಲೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇಂದು ಕೊಡಗಿನ ಅರಣ್ಯ ಪ್ರದೇಶ ಬರಡಾಗುತ್ತಿದೆ. ತಿತಿಮತಿಯಿಂದ ಹುಣಸೂರಿಗೆ ತೆರಳುವ ಮಾರ್ಗದ ಎರಡೂ ಬದಿಗಳಲ್ಲಿ ಹೆಸರಿಗೆ ಮಾತ್ರ ಅರಣ್ಯವಿದ್ದು, ಅಲ್ಲಿ ಸಂಪೂರ್ಣವಾಗಿ ಕಾಡು ನಾಶವಾಗಿದೆ. ಅರಣ್ಯವನ್ನು  ಬೆಳೆಸುವ ಯಾವುದೇ ವೈಜ್ಞಾನಿಕ ಯೋಜನೆಗಳಿಗೆ ಕೈಹಾಕದ ಅರಣ್ಯ ಇಲಾಖೆ ಸಾರ್ವಜನಿಕರಿಗೆ ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಕಿರುಕುಳ ನೀಡಲು ಗರಿಷ್ಠವಾಗಿ ಪ್ರಯತ್ನಿಸುತ್ತಿದೆ. ಸರಕಾರದಿಂದ ಮಂಜೂರಾದ ಪರಿಹಾರ ಹಣವನ್ನು ಕೂಡಾ ಫಲಾನುಭವಿಗಳಿಗೆ ನೀಡಲು ಅರಣ್ಯ ಇಲಾಖೆ ಸತಾಯಿಸುತ್ತಿದೆ ಎಂದು ಪ್ರಥ್ಯು ದೂರಿದ್ದಾರೆ.

ಅರಣ್ಯ ಇಲಾಖೆಯ ಬೇಜವಾಬ್ದಾರಿ ವರ್ತನೆಯ ಬಗ್ಗೆ ಜನತೆ ತೀವ್ರವಾಗಿ ಬೇಸತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವ ಹಂತ ತಲುಪಿದೆ. ಆದ್ದರಿಂದ ಈ ಬಗ್ಗೆ ಜಿಲ್ಲೆಯಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಜನರನ್ನು ಮತ್ತು ಜನಪ್ರತಿನಿಧಿಗಳನ್ನು ಸಂಘಟಿಸಿ ಬೃಹತ್ ಪ್ರತಿಭಟನೆಯ ಮೂಲಕ ಸರಕಾರದ ಗಮನ ಸೆಳೆಯುವುದು ಅನಿವಾರ್ಯವಾಗಿದೆ. ಅಲ್ಲದೆ ಕಾನೂನು ಹೋರಾಟ ಮುಂದುವರೆಸುವ ಕುರಿತು ಕೂಡಾ ತಜ್ಞರೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಬಿ.ಎನ್. ಪ್ರಥ್ಯು ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss