ಹೊಸದಿಗಂತ ವರದಿ, ಅಂಕೋಲಾ:
ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ಆಗ್ರಹವಿರುವ ಇಲ್ಲಿನ ಬಳಲೆ ಗೋಕರ್ಣ ಕ್ರಾಸ್ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಭೇಟಿ ನೀಡಿ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಈ ಭಾಗದಲ್ಲಿ ಮೇಲ್ಸೇತುವೆ ಅಗತ್ಯವಿದ್ದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಎಂ.ಶೆಟ್ಟಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣ ಆಗದಿದ್ದರೆ ಹೆಚ್ಚಿನ ಅಪಘಾತ,ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಮನವರಿಕೆ ಮಾಡಿದರು.
ಜಿ.ಪಂ ಸದಸ್ಯ ಜಗದೀಶ ನಾಯಕ ಮೊಗಟಾ ಅವರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ಒಂದು ಬದಿಯಲ್ಲಿ ಗೋಕರ್ಣಕ್ಕೆ ಇನ್ನೊಂದು ಬದಿಯಲ್ಲಿ ಹಿಲ್ಲೂರು ಕಡೆ ಸಾಗುವ ರಸ್ತೆ ಇರುವುದರಿಂದ ಮೇಲ್ಸೇತುವೆ ಅತ್ಯವಶ್ಯಕ ಎಂದರು.
ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೇಲ್ಸೇತುವೆ ಬೇಡಿಕೆಗೆ
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.
ಉಪ ವಿಭಾಗ ಅಧಿಕಾರಿ ಎಂ.ಅಜಿತ್, ಗ್ರಾಮೀಣ ಯುವ ಹೋರಾಟ ಸಮಿತಿ ಸಗಡಗೇರಿ ಅಧ್ಯಕ್ಷ ದೇವರಾಯ ನಾಯಕ, ವಿನಾಯಕ ನಾಯಕ ಮೊದಲಾದವರು ಉಪಸ್ಥಿತರಿದ್ದರು.
ಬಳಲೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಹಲವಾರು ಬಾರಿ ಪ್ರತಿಭಟನೆ ನೆಡೆಸಲಾಗಿತ್ತು. ಇತ್ತೀಚೆಗೆ ಗೋಕರ್ಣ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಜನರು ಪಕ್ಷಾತೀತವಾಗಿ ರಸ್ತೆ ತಡೆ ಮೂಲಕ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗಮನ ಸೆಳೆದಿದ್ದರು.