ಪೊಲೀಸ್ ಇಲಾಖೆಯೊಂದಿಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯ : ಎಸ್ಪಿ ಕೆ.ರಾಮರಾಜನ್

ಹೊಸ ದಿಗಂತ ವರದಿ, ಕುಶಾಲನಗರ:

ಸಂಘ ಸಂಸ್ಥೆಗಳು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳುವ ಮೂಲಕ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಕರೆ ನೀಡಿದರು.
ಕುಶಾಲನಗರದ ರಿಜಿಡ್ ಗ್ರೂಪ್ ವತಿಯಿಂದ ಜನತಾ ಕಾಲೊನಿಯಲ್ಲಿ ನಿರ್ಮಿಸಿದ್ದ ಗಡಿಯಾರ ಸ್ಥಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯ ಜನತೆ ಬುದ್ಧಿವಂತರು. ಆದರೂ ಜಿಲ್ಲೆಗೆ ನಾನು ಆಗಮಿಸಿದ 10 ದಿನದಲ್ಲಿ 10 ಅಪಘಾತದಲ್ಲಿ ಸಾವು ಸಂಭವಿಸಿರುವುದು ಅತ್ಯಂತ ಬೇಸರದ ವಿಚಾರ. ವಾಹನ ಚಾಲನೆ ಸಂದರ್ಭದಲ್ಲಿ ಪಾಲಿಸಬೇಕಿರುವ ಕಾನೂನು ಬಗ್ಗೆ ತಿಳುವಳಿಕೆ ಮೂಡಿಸಲು ರಿಜಿಡ್ ಗ್ರೂಪ್’ನಂತಹ ಸಂಸ್ಥೆಗಳು ಪೊಲೀಸರೊಂದಿಗೆ ಕೈಜೋಡಿಸಬೇಕು. ಕಾನೂನು ಅರಿವು ಮೂಡಿಸುವ ಫಲಕಗಳು ಮತ್ತು ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಕರೆ ನೀಡಿದರು.
ಗಡಿಯಾರ ಸ್ಥಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಮಾತನಾಡಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆನ್ನುವ ಮನಸ್ಸು ಬಂದರೆ ಸಾಕು. ಗಡಿಯಾರ ಸ್ಥಂಭ ಎನ್ನುವುದು ಒಂದು ಪಟ್ಟಣ, ನಗರಗಳ ಗುರುತು ಆಗುವುದು. ಇಂತಹ ಶಾಶ್ವತವಾದ ಕೆಲಸಗಳಿಂದ ಸಮಾಜಕ್ಕೂ ಗೌರವ ಹೆಚ್ಚಾಗಿಲಿದೆ ಎಂದು ರಿಜಿಡ್ ಗ್ರೂಪ್ ಅನ್ನು ಶ್ಲಾಘಿಸಿದರು.
ವರಿಷ್ಠಾಧಿಕಾರಿಗಳ ಆಶಯದಂತೆ ಕುಶಾಲನಗರದ ಆರ್ಯವೈಶ್ಯ ಮಂಡಳಿ ವತಿಯಿಂದ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಒದಗಿಸುತ್ತೇವೆ. ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಎಲ್.ಉದಯಕುಮಾರ್ ತಿಳಿಸಿದರು.
ಕುಶಾಲನಗರ ಪುರಸಭೆ ಸದಸ್ಯ ಎಂ.ಬಿ.ಸುರೇಶ್ ಮಾತನಾಡಿ, ಒಂದು ಒಳ್ಳೆಯ ಕೆಲಸ ಮಾಡಲು ಹೊರಟಾಗ ಅಡಚಣೆ ಬರುವುದು ಸಹಜ. ಅದನ್ನ ಮೀರಿ ಗುರಿ ಮುಟ್ಟುವುದು ಎಷ್ಟು ಕಷ್ಟ ಎನ್ನುವುದನ್ನು ರಿಜಿಡ್ ಗ್ರೂಪ್ ಸದಸ್ಯರೊಂದಿಗೆ ನಾನು ನೋಡಿದ್ದೇನೆ ಮತ್ತು ಅನುಭವಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ನಾಗೇಶ್ ವಹಿಸಿದ್ದರು. ಕೆ.ಎನ್. ನಾಗಪ್ರವೀಣ್, ಜಿ.ರಾಘವೇಂದ್ರ, ಎನ್.ವಿ.ಬಾಬು, ವಿ.ಆರ್.ಶ್ರೀನಿವಾಸ್, ಎ.ಎಸ್.ಕುಮಾರ್, ವಿ.ವಿ.ತಿಲಕ್, ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್, ಬಿಜೆಪಿ ನಗರಾಧ್ಯಕ್ಷ ಉಮಾಶಂಕರ್, ಪ್ರಮುಖರಾದ ಜಿ.ಎಲ್.ನಾಗರಾಜ್, ಬಿ.ಎಲ್.ಸತ್ಯನಾರಾಯಣ, ಚಿತ್ರಾ ರಮೇಶ್, ಪ್ರತಿಮಾ ರಾಘವೇಂದ್ರ ಇತರರು ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!