ನ.14 ರಂದು ಸಹಕಾರ ಸಪ್ತಾಹ: ಮುಖ್ಯಮಂತ್ರಿ ಬೊಮ್ಮಾಯಿರಿಂದ ಕಾರ್ಯಕ್ರಮ ಉದ್ಘಾಟನೆ

ಹೊಸದಿಗಂತ ವರದಿ,ಕಲಬುರಗಿ:

ಸಹಕಾರ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜಿಲ್ಲೆಯ ಸೇಡಂ ಪಟ್ಟಣದಲ್ಲಿ ನ.14ರಂದು ಬೆಳಗ್ಗೆ 11.15ಕ್ಕೆ ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸೇಡಂ ಶಾಸಕ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್ ಹೇಳಿದರು.

ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ನೂರಾರು ಸಹಕಾರಿ ಸಂಘಗಳ ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ನಾಲ್ಕು ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ರಾಜ್ಯ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಇನ್ನಿತರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ ಹಾಲು ಒಕ್ಕೂಟ ಮಹಾಮಂಡಳಕ್ಕೂ ಆಹ್ವಾನ ನೀಡಲಾಗಿದೆ‌. ಜೊತೆಗೆ ಆರು ಜಿಲ್ಲೆಗಳ ಸಹಕಾರಿ ಯೂನಿಯನ್ ಗಳು ಈ ಬೃಹತ್ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ತಂಡ ರಚಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿ ವೇದಿಕೆ, ಊಟ, ಆತಿಥ್ಯ, ಪೆಂಡಾಲ್ ಹಾಗೂ ನಗರಾಲಂಕಾರ ಸಮಿತಿಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿವಿಧ ಯೋಜನೆಗಳಿಗೆ ಚಾಲನೆ:
ಇನ್ನೂ ಇದೇ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಯಶಸ್ವಿನಿ ಕಾರ್ಡುಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಿದ್ದಾರೆ. ಇದರ ಜೊತೆಗೆ, ಸಹಕಾರ ಕ್ಷೇತ್ರದಲ್ಲಿ ದುಡಿದಿರುವ ಮುತ್ಸದ್ಧಿಗಳಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 25 ಸಾವಿರ ಬಿಪಿಎಲ್- ಎಪಿಎಲ್ ಕಾರ್ಡ್ ಬಳಕೆದಾರ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ 100 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಇದರ ಜತೆಗೆ ಕಾರ್ಮಿಕ ಇಲಾಖೆಯಿಂದ ನೊಂದಾಯಿತರಿಗೆ 10 ಸಾವಿರ ಕಾರ್ಡ್ ವಿತರಿಸಲಾಗುತ್ತಿದ್ದು, ಹತ್ತು ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!