ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಗಾವತಿ ಸಮೀಪದಲ್ಲಿರುವ ಬುಕ್ಕಸಾಗರದ ಮಠದಲ್ಲಿ ತಾಮ್ರ ಶಾಸನಗಳು ಪತ್ತೆಯಾಗಿವೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಹೊಸಪೇಟೆ ತಾಲೂಕಿನ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಭೇಟಿ ಕೊಟ್ಟ ಹಿರಿಯ ಇತಿಹಾಸ ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ, ಎರಡು ತಾಮ್ರಶಾಸನಗಳು ಇರುವುದನ್ನು ದೃಢಪಡಿಸಿದ್ದಾರೆ.
ಮಠದಲ್ಲಿ ಒಟ್ಟು ಮೂರು ಶಾಸನಗಳಿದ್ದು, ಒಂದು ಈಗಾಗಲೇ ಪ್ರಕಟವಾಗಿದೆ. ಉಳಿದೆರಡು ಅಪ್ರಕಟಿತ. ತಾಮ್ರ ಶಾಸನಗಳ ಬಗ್ಗೆ ಪರಿಶೀಲನೆಗೆ ಮಠದ ಹಾಲಿ ಸ್ವಾಮೀಜಿ ಕರಿಸಿದ್ದೇಶ್ವರ ವಿಶ್ವಾರಾಧ್ಯ, ವಿಶ್ವನಾಥಸ್ವಾಮಿ ಅವಕಾಶ ಮಾಡಿಕೊಟ್ಟಿದ್ದಾರೆ. ಶಾಸನಗಳ ಛಾಯಾಪ್ರತಿಗಳನ್ನು ಸಂಶೋಧನಾ ತಂಡದ ಸಂತೋಷ ಕುಂಬಾರ, ನಿರುಪಾದಿ ಭೋವಿ ನೀಡಿದ್ದಾರೆ ಎಂದು ಡಾ.ಕೋಲ್ಕಾರ ತಿಳಿಸಿದರು.
ಮೊದಲ ಶಾಸನ 1612ರ ಕಾಲಕ್ಕೆ ಸೇರಿದೆ. ಚಂದ್ರಗಿರಿಯನ್ನು ಕೇಂದ್ರವನ್ನಾಗಿಸಿಕೊಂಡು ಆಡಳಿತ ಮಾಡುತ್ತಿದ್ದ ವಿಜಯನಗರ ಅರವೀಡು ಮನೆತನದ ವೆಂಕಟಪತಿದೇವರಾಯ ಬುಕ್ಕಸಾಗರದ ಕರಿಸಿದ್ದೇಶ್ವರ ಮಠಕ್ಕೆ ಜಂಗಮಾರ್ಚನೆಗಾಗಿ ಗಂಗಾವತಿ ಬಳಿಯ ಕಲ್ಗುಡಿ ಎಂಬ ಗ್ರಾಮವನ್ನು ದಾನವಾಗಿ ನೀಡಿದ ಬಗ್ಗೆ ಶಾಸನ ತಿಳಿಸುತ್ತದೆ. ಇದೇ ಕಾರಣಕ್ಕಾಗಿ ಗಂಗಾವತಿ ತಾಲೂಕಿನ ಕಲ್ಗುಡಿಯನ್ನು ಜಂಗಮರ ಕಲ್ಗುಡಿ ಎಂದು ಕರೆಯಲಾಗುತ್ತಿದೆ.
ಎರಡನೆಯ ಶಾಸನವು 21 ಸಾಲುಗಳಲ್ಲಿದ್ದು, ತೆಲುಗು ಭಾಷೆ ಮತ್ತು ಕನ್ನಡ ಲಿಪಿಯಲ್ಲಿದೆ. ವಿಜಯನಗರ ಸಾಮ್ರಾಟ ಬುಕ್ಕರಾಯನ ಕಾಲದಲ್ಲಿ ಕುಂದ್ರುಪಿ ರಾಜ್ಯದ ವೀರಮಲ್ಲನಗೌಡ ರೆಡ್ಡಿಯು ನೀಡಿದ ದಾನದ ಬಗ್ಗೆ ಮಾಹಿತಿ ನೀಡುತ್ತದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.
ಮೂರನೆಯ ಶಾಸನವು 16ನೇ ಶತಮಾನಕ್ಕೆ ಸೇರಿದ್ದು, ಮೂರು ಫಲಕಗಳಲ್ಲಿ 47 ಸಾಲುಗಳಲ್ಲಿ ಬರೆಯಲಾಗಿದೆ. ಇದು ಕನ್ನಡ ಭಾಷೆ ಮತ್ತು ಲಿಪಿಯಲ್ಲಿದೆ. ಕೆಳದಿ ದೊರೆ ವೆಂಕಟಪ್ಪನಾಯಕನ ಸೂಚನೆಯಂತೆ ಮಹಾನಾಡು ಹಾಗೂ ನಾನಾ ಪ್ರದೇಶಕ್ಕೆ ದಾನ ನೀಡಿದ ಬಗ್ಗೆ ಉಲ್ಲೇಖವಿದೆ. 25 ವ್ಯಾಪಾರಿಗಳು ಮಠದಲ್ಲಿ ನಡೆಸುತ್ತಿದ್ದ ಮಹೇಶ್ವರರ ಆರಾಧನೆಗಾಗಿ ಮೂರುವೀಸ ಅಡಕೆ, ಒಂದು ಎತ್ತಿನ ಹೋರಿನ ಮೆಣಸು, ಭತ್ತ, ಉಪ್ಪಿನ ಹೇರಿಗೆ ಒಂದಕ್ಕೆ ಅರ್ಧವೀಸ ತೆರಿಗೆಯನ್ನು ದತ್ತಿಯಾಗಿ ನೀಡಿದ ಬಗ್ಗೆ ತಿಳಿಸುತ್ತದೆ.