ಅಂಕೋಲಾ: ನಕಲಿ ನೋಟು ಜಾಲ ಭೇದಿಸಿದ ಪೊಲೀಸರು; ನಾಲ್ವರು ಖದೀಮರು ಸೆರೆ

ಹೊಸದಿಗಂತ ವರದಿ, ಅಂಕೋಲಾ
ನಕಲಿ ನೋಟುಗಳ ಚಲಾವಣಾ ಜಾಲವನ್ನು ಅಂಕೋಲಾ ಪೊಲೀಸರ ತಂಡ ಭೇದಿಸಿದೆ. ಅಸಲಿ ನೋಟಿಗೆ ಖೋಟಾನೋಟು ಬದಲಾವಣೆ ಮಾಡಿಕೊಡುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾರವಾರ ಕೋಡಿಭಾಗದ ನಿವಾಸಿ ಹೊಟೇಲ್ ಕಾರ್ಮಿಕ ಪ್ರವೀಣ ರಾಜನ್ ನಾಯರ್ (46) ಗೋವಾ ಮಡಗಾವ ನಿವಾಸಿ ಲೋಯ್ಡ ಲಾರೆನ್ಸ್ ಸ್ಟೀವಿಸ್ (29) ಗೋವಾ ಪತ್ರೋಡಾ ನಿವಾಸಿ ಲಾರ್ಸನ್ ಲೂಯಿಸ್ ಸಿಲ್ವ (26) ಗೋವಾ ಮಡಗಾವ ನಿವಾಸಿ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು ಅವರಿಂದ 500 ರೂಪಾಯಿ ಮುಖ ಬೆಲೆಯ 26 ಖೋಟಾ ನೋಟುಗಳು ಮತ್ತು 500 ರೂಪಾಯಿ ಮುಖ ಬೆಲೆಯ 40 ಅಸಲಿ ನೋಟುಗಳು ಕೃತ್ಯಕ್ಕೆ ಬಳಸಿದ ಒಂದು ಸ್ಕೂಟಿ ಮತ್ತು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಾರವಾರದ ಕೋಡಿಭಾಗದ ನಿವಾಸಿ ಚಾಲಕ ವೃತ್ತಿ ಮಾಡುತ್ತಿರುವ ಮುಸ್ತಾಕ ಹಸನ್ ಬೇಗ್ (43) ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರಿದಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಕಲಿ ನೋಟುಗಳ ಚಲಾವಣೆ ಹೆಚ್ಚುತ್ತಿರುವ ಮಾಹಿತಿ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ವಿಶೇಷ ತಂಡ ರಚಿಸಿದ್ದು
ಗುರುವಾರ ರಾತ್ರಿ ಆರೋಪಿಗಳು ಕಾರವಾರದ ಭದ್ರಾ ಹೊಟೇಲ್ ಎದುರು ನೋಟುಗಳ ವಿನಿಮಯ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠೆಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ಭಗವಾನ ಗಾಂವಕರ, ಮಂಜುನಾಥ ಲಕ್ಮಾಪುರ, ಸಂತೋಷಕುಮಾರ, ಪ್ರೇಮಾನಂದ ನಾಯ್ಕ, ಕೆ.ಶ್ರೀಕಾಂತ, ಆಸೀಫ್. ಆರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ನಕಲಿ ನೋಟುಗಳ ಜಾಲ ಪತ್ತೆ ಹಚ್ಚಿದ ಅಂಕೋಲಾ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!