ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ 3ನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ ನೀಡಿದ್ದು, ಕೋವಿಡ್ ಮಾರ್ಗಸೂಚಿ ಪಾಲಿಸುವಂತೆ ನೋಡಿಕೊಳ್ಳಿ ಎಂದು ಸೂಚಿಸಿದೆ.
ಈ ಕುರಿತು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಮತ್ತಷ್ಟು ನಿಯಂತ್ರಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಜಾಗ್ರತೆಯಿಂದ ಅನ್ಲಾಕ್ ನಿಯಮಗಳ ಜಾರಿಗೆ ಸೂಚನೆ ನೀಡಲಾಗಿದೆ. ಮತ್ತೆ ಕೊರೋನಾ ಕೇಸ್ ಹೆಚ್ಚಳವಾಗದಂತೆ ಕ್ರಮ ಕೈಗೊಳ್ಳಿ. ಜನಜಂಗುಳಿ ಸೇರದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಮಾರುಕಟ್ಟೆಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಜನ ಸೇರದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ ಹೊಣೆ. ಎಲ್ಲಾ ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲು ಸಲಹೆ ನೀಡಲಾಗಿದೆ.
ದೇಶದಲ್ಲಿ ಕೊರೋನಾ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಲಸಿಕೆ ನೀಡುವುದಕ್ಕೆ ಹೆಚ್ಚಿನ ಒತ್ತು ನೀಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಎಲ್ಲಾ ರಾಜ್ಯಗಳ ಸಿಎಸ್ಗಳಿಗೆ ಅಜಯ್ ಭಲ್ಲಾ ಸೂಚನೆ ನೀಡಿದ್ದಾರೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸಭೆ ನಡೆಸಿದ್ದಾರೆ. ಆರೋಗ್ಯ ಕಾರ್ಯದರ್ಶಿ, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದಾರೆ. ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಪಂಜಾಬ್, ದೆಹಲಿ, ಕೇರಳ, ಹರಿಯಾಣ ರಾಜ್ಯದ ಅಧಿಕಾರಿಗಳು ಭಾಗಿಯಾಗಿದ್ದಾರೆ.ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜೇಶ್ ಭೂಷಣ್ ಚರ್ಚೆ ನಡೆಸಿದ್ದಾರೆ.