ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಿಲ್ಲೆಯ ನ.ರಾ.ಪುರ ತಾಲ್ಲೂಕು ಬಾಳೇಹೊನ್ನೂರಿನ ನವೋದಯ ವಿದ್ಯಾಲಯದಲ್ಲಿ ಕೊರೋನಾ ಸ್ಪೋಟಗೊಂಡಿದ್ದು, ಶಿಕ್ಷಕರೂ ಸೇರಿ ೬೯ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಶಾಲೆಯ ೫೯ ಮಕ್ಕಳು ಹಾಗೂ ೧೦ ಮಂದಿ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ದೃಢಪಡಿಸಿದ್ದಾರೆ.
ಬಾಳೆಹೊನ್ನೂರು ಪಟ್ಟಣ ಸಮೀಪದ ಸೀಗೋಡು ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯಯದಲ್ಲಿ ೪೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ಪೈಕಿ ಎಂಟತ್ತು ಮಂದಿ ವಿದ್ಯಾರ್ಥಿಗಳು ಹಾಗೂ ಮೂರು ಮಂದಿ ಶಿಕ್ಷಕರಲ್ಲಿ ಶನಿವಾರ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿವ್ಯಾಸಂಗ ಮಾಡುತ್ತಿರುವ ಮಕ್ಕಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಸೇರಿ ೪೫೭ ಮಂದಿಯಿಂದ ಸ್ವಾಬ್ ಸಂಗ್ರಹಿಸಿ ಪರಿಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ೫೯ ಮಕ್ಕಳು ೪ ಮಂದಿ ಶಿಕ್ಷಕರು ಹಾಗೂ ೬ ಮಂದಿ ಸಿಬ್ಬಂದಿಯಲ್ಲಿ ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ.
ಎಲ್ಲಾ ಸೋಂಕಿತರನ್ನೂ ನವೋದಯ ವಿದ್ಯಾಲಯದಲ್ಲೇ ಕ್ವಾರಂಟೈನ್ ಮಾಡಲಾಗಿದೆ. ಮೊದಲು ಶಾಲೆಯ ಶಿಕ್ಷರೊಬ್ಬರಲ್ಲಿ ಸೋಂಕಿರುವುದು ಪತ್ತೆಯಾಗಿತ್ತು ಈಗ ಅವರ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಪತ್ತೆ ಹಚ್ಚಿ ಪರೀಕ್ಷೆಗೊಳಪಡಿಸಲಾಗುತ್ತಿದೆ.
ಸೋಂಕು ಸ್ಪೋಟಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ಡಾ.ಉಮೇಶ್, ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ಇತರೆ ವೈದ್ಯರು ಹಾಗೂ ಸಿಬ್ಬಂದಿ ಶಾಲೆಗೆ ಭೇಟಿ ನೀಡಿ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಜವಾಹರ್ ನವೋದಯ ವಿದ್ಯಾಲಯವನ್ನು ಸೀಲ್ಡೌನ್ ಮಾಡಲಾಗಿದ್ದು, ಸೋಂಕಿತ ಮಕ್ಕಳು, ಸಿಬ್ಬಂದಿಗೆ ಚಿಕಿತ್ಸೆ ನೀಡಲು ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಸೇರಿದಂತೆ ೧೫ ಮಂದಿಯನ್ನು ಜಿಲ್ಲಾ ವೈದ್ಯಾಧಿಕಾರಿ ನಿಯೋಜಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಐದಾರು ತಿಂಗಳಿನಿಂದ ಸೋಂಕು ಸಂಪೂರ್ಣ ಇಳಿಮುಖ ಕಂಡಿತ್ತು. ತಿಂಗಳಲ್ಲಿ ಮೂರ್ನಾಲ್ಕು ದಿನ ಸೋಂಕಿನ ಶೂನ್ಯ ಪ್ರಕರಣಗಳು ವರದಿಯಾಗುತ್ತಿದ್ದವು. ಉಳಿದಂತೆ ಸೋಂಕಿತರ ಸಂಖ್ಯೆ ಎರಡಂಕಿಯೊಳಗೇ ಇರುತ್ತಿತ್ತು. ಇದೀಗ ದಿಢೀರನೆ ಸೋಂಕು ಸ್ಪೋಟಗೊಡಿರುವುದು ಜನರ ಭೀತಿಗೆ ಕಾರಣವಾಗಿದೆ.
ಸೋಂಕು ಇಳಿಮುಖಗೊಂಡಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹ ನಿಯಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು, ಮಾಸ್ಕ್ಗಳನ್ನು ಧರಿಸದೆ ಎಲ್ಲೆಂದರಲ್ಲಿ ತಿರುಗಾಡುವುದು ಕಂಡುಬಂದಿತ್ತು. ಇದೀಗ ಸೋಂಕು ಸ್ಪೋಟಗೊಂಡಿರುವುದಿರಿಂದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಬಗ್ಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.