ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಕೊರೋನಾ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯದ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ್ದು, ನೈಟ್ ಕರ್ಫ್ಯೂಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಯನ್ನ ಹೊರಡಿಸಿದೆ.
ಕೊರೋನಾ ಕರ್ಫ್ಯೂ ನಾಳೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮುಂದಿನ 10 ದಿನಗಳವರೆಗೆ ಜಾರಿಯಲ್ಲಿರುತ್ತೆ.
ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ರಾಜ್ಯದ 8 ನಗರಗಳಲ್ಲಿ ಅನ್ವಯವಾಗುವಂತ ಕೊರೋನಾ ಕರ್ಪ್ಯೂ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದ್ದು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ನೈಟ್ ಕರ್ಪ್ಯೂನಿಂದ ವಿನಾಯಿತಿ ನೀಡಲಾಗಿದೆ. ಆದರೆ ನೈಟ್ ಕರ್ಪ್ಯೂ ಜಾರಿಗೆ ಮುನ್ನವೇ ಕಚೇರಿಯಲ್ಲಿ ಇರಬೇಕು ಎಂದು ತಿಳಿಸಿದೆ.
ನಾಳೆ ರಾತ್ರಿ 10 ರಿಂದ ಏಪ್ರಿಲ್ 20ರವರೆಗೆ ಜಾರಿಯಲ್ಲಿರುವಂತ 8 ನಗರಗಳಲ್ಲಿನ ನೈಟ್ ಕರ್ಪ್ಯೂ ಸಂದರ್ಭದಲ್ಲಿ ಅಗತ್ಯ ಸೇವೆ ಹೊರತುಪಡಿಸಿ, ಉಳಿದೆಲ್ಲಾ ಸೇವೆಗಳಿಗೆ ಬ್ರೇಕ್ ಹಾಕಲಾಗಿದೆ. ರಾತ್ರಿ ವೈದ್ಯಕೀಯ ಸೇವೆಗೆ ಅನುಮತಿಸಿರುವಂತ ಸರ್ಕಾರ, ಹೋಂ ಡಿಲಿವರಿ, ಇ-ಕಾಮರ್ಸ್ ವಾಹನಗಳ ಸಂಚಾರಕ್ಕೆ ಅನುಮತಿಸಿದೆ.
ಅಲ್ಲದೇ ರಾತ್ರಿ ಸಂಚರಿಸುವಂತ ಪ್ರಯಾಣಿಕರಿಗೆ ಟಿಕೆಟ್ ಮುಂಗಡ ಬುಕ್ಕಿಂಗ್ ಇದ್ದವರಿಗೆ ಮಾತ್ರವೇ ಅವಕಾಶ ನೀಡಲಾಗಿದ್ದು. ರಾತ್ರಿ 10 ಗಂಟೆಯ ನಂತ್ರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಹೊಸ ಮಾರ್ಗಸೂಚಿ ಕ್ರಮಗಳಲ್ಲಿ ತಿಳಿಸಿದೆ. ಸರಕು ಸಾಗಾಣೆ ವಾಹನಗಳ ಸಂಚಾರಕ್ಕೂ ಅನುಮತಿಸಲಾಗಿದೆ.
‘ಕೊರೋನಾ ನೈಟ್ ಕರ್ಪ್ಯೂ’ ಮಾರ್ಗಸೂಚಿ ಕ್ರಮಗಳು:
- ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚಾರಕ್ಕೆ ಅನುಮತಿ
- ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತಹ ಎಲ್ಲಾ ಕಾರ್ಖಾನೆಗಳು, ಕಂಪನಿಗಳು, ಸಂಸ್ಥೆಗಳು ಯಥಾರೀತಿ ಕಾರ್ಯನಿರ್ವಹಿಸಲು ಅನುಮತಿಸಿದೆ. ಆದರೆ ಸಂಬಂಧಿಸಿದ ಕಾರ್ಮಿಕರು ಕೊರೋನಾ ಕರ್ಪ್ಯೂ ಅವಧಿಗೆ ಮುನ್ನವೇ ಕರ್ತವ್ಯದಲ್ಲಿ ಹಾಜರಿರತಕ್ಕದ್ದು.
- ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿಸಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧ
- ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು, ಸರಕು ಸಾಗಾಣಿಕೆ ವಾಹನಗಳು, ಹೋಂ ಡಿಲಿವರಿ, ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ
- ರಾತ್ರಿ ವೇಳೆಯಲ್ಲಿನ ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿ
- ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಗಳ ಆಧಾರದ ಮೇಲೆ ಆಟೋ, ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿಈ ಆದೇಶವನ್ನು ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಮೈಸೂರು, ಕಲಬುರ್ಗಿ, ಮಂಗಳೂರು ಮತ್ತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸತಕ್ಕದ್ದು ಎಂಬುದಾಗಿ ತಿಳಿಸಿದೆ.
ಒಂದು ವೇಳೆ ಈ ನಿಯಮಗಳನ್ನು ಮೀರಿದಲ್ಲಿ, ಅಂತಹ ಲೋಪವೆಸಗುವಂತಹವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗುಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲು ತಿಳಿಸಿದೆ.