ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಐಪಿಎಲ್ ಅಂಗಳಕ್ಕೆ ಕೊರೋನಾ ಎಂಟ್ರಿಕೊಟ್ಟ ಬೆನ್ನಲ್ಲೇ ಬಿಸಿಸಿಐ ಮಿಲಿಯನ್ ಡಾಲರ್ ಟೂರ್ನಿಯನ್ನು ರದ್ದು ಮಾಡಿದ್ದು, ಈ ನಿರ್ಧಾರವನ್ನು ಫ್ರಾಂಚೈಸಿಗಳು ಮತ್ತು ಮಧ್ಯಸ್ಥಿಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇದರಿಂದ ಬಿಸಿಸಿಐ ಬರೋಬ್ಬರಿ 2 ಸಾವಿರ ಕೋಟಿಗಿಂತ ಹೆಚ್ಚು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಏಪ್ರಿಲ್ 9ರಿಂದ ಶುರುವಾಗಿರುವ ಟೂರ್ನಿ ಮೊದಲಾರ್ಧವನ್ನು ಮುಗಿಸಿದೆ. ಇನ್ನು ದ್ವಿತೀಯಾರ್ಧದ ಲೀಗ್ ಪಂದ್ಯಗಳು ಮತ್ತು ಪ್ಲೇ ಆಫ್ ಪಂದ್ಯಗಳು ಬಾಕಿಯುಳಿದಿವೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಟೂರ್ನಿ ಪುನರಾರಂಭಗೊಳ್ಳುವ ಸಾಧ್ಯತೆ ವಿರಳವಾಗಿದೆ.ಇದರಿಂದ ಬಿಸಿಸಿಐ ಬ್ರಾಡ್ಕಾಸ್ಟ್ ಮತ್ತು ಸ್ಪಾನ್ಸರ್ಶಿಪ್ ಮೂಲಗಳಿಂದ ಸುಮಾರು 2000 ಕ್ಕೂ ಹೆಚ್ಚು ಕೋಟಿ ರೂ. ಕಳೆದುಕೊಳ್ಳಲಿದೆ.
ಈ ಆವೃತ್ತಿ ಮಧ್ಯದಲ್ಲಿ ಸ್ಥಗಿತಗೊಂಡಿರುವುದರಿಂದ ಏನಿಲ್ಲ ಅಂದರು ನಾವು 2000 ರಿಂದ 2,500 ಕೋಟಿ ರೂ.ಗಳವರೆಗೆ ಕಳೆದುಕೊಳ್ಳಲಿದ್ದೇವೆ. ನನ್ನ ಅಂದಾಜಿನ ಪ್ರಕಾರ 2,200 ಕೋಟಿ ರೂ ಎಂದು ಅಂದಾಜಿಸಿದ್ದೇನೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾವೆಲ್ಲರೂ ಒಟ್ಟಾಗಿದ್ದೇವೆ. ಸುರಕ್ಷತೆ ಮತ್ತು ರಕ್ಷಣೆಯ ದೃಷ್ಟಿಯಿಂದ 2021 ವಿವೋ ಐಪಿಎಲ್ ಮುಂದೂಡುವುದು ಅನಿವಾರ್ಯವಾಗಿತ್ತು. ಹಾಗಾಗಿ ನಾವು ಬಿಸಿಸಿಐನ ಟೂರ್ನಿ ಮುಂದೂಡುವ ನಿರ್ಧಾರವನ್ನು ಬೆಂಬಲಿಸುತ್ತೇವೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೇಳಿಕೆ ಬಿಡುಗಡೆ ಮಾಡಿದೆ.
ಇದೇ ಸಂದರ್ಭದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲ್ಲ ಆಟಗಾರರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ವಿಚಾರದಲ್ಲಿ ಬಿಸಿಸಿಐ ಜೊತೆ ಸಮಾಲೋಚನೆ ನಡೆಸಿ ಖಚಿತಪಡಿಸಿಕೊಳ್ಳಲಿದೆ ಎಂದು ತಿಳಿಸಿದೆ.
ಮುಂಬೈ ಇಂಡಿಯನ್ಸ್ ಮತ್ತು ಮುಂಬೈ ಇಂಡಿಯನ್ಸ್ ಕೂಡ ಎಲ್ಲ ದೇಶಿ ಮತ್ತು ವಿದೇಶಿ ಆಟಗಾರರನ್ನು ಸುರಕ್ಷಿತ ಮಾರ್ಗದಲ್ಲಿ ಅವರ ತವರಿಗೆ ಕಳುಹಿಸುವ ವಿಚಾರವಾಗಿ ತುಂಬಾ ಹತ್ತಿರದಿಂದ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿವೆ.