ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸ ದಿಗಂತ ವರದಿ, ಚಿತ್ರದುರ್ಗ:
ನಗರದ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಕೊರೋನಾ ಸೋಂಕು ತಡೆ ಲಸಿಕೆ ನೀಡಲಾಗುತ್ತಿದೆ. ಇಲ್ಲಿ ಲಸಿಕೆ ಪಡೆಯಲು ಜನಜಂಗುಳಿ ಸೇರುತ್ತಿದೆ. ನೀ ಮುಂದು ತಾ ಮುಂದು ಎಂದು ಲಸಿಕೆ ಪಡೆಯಲು ಜನ ಮುಗಿ ಬೀಳುತ್ತಿದ್ದಾರೆ. ಹಾಗಾಗಿ ಇಲ್ಲಿ ಯಾವುದೇ ಕೋವಿಡ್ ನಿಯಮಗಳು ಪಾಲನೆಯಾಗುತ್ತಿಲ್ಲ. ಹೋದಲ್ಲಿ ಬಂದಲ್ಲಿ ಸಾಮಾಜಿಕ ಅಂತರ ಕಾಯದುಕೊಳ್ಳಿ ಹೇಳುವ ಆರೋಗ್ಯ ಇಲಾಖೆಯಲ್ಲೇ ಕೊರೋನಾ ನಿಯಮ ಗಾಳಿಗೆ ತೂರಲಾಗಿದೆ.
ಕೊರೋನಾ ನಿಯಂತ್ರಣಕ್ಕೆ ಸ್ವದೇಶಿ ಲಸಿಕೆ ಕಂಡುಹಿಡಿದಾಗ ಈ ಬಗ್ಗೆ ಮೂಗು ಮುರಿದವರೇ ಹೆಚ್ಚು. ಲಸಿಕೆ ಹಾಕಿಕೊಂಡಲ್ಲಿ ಕಿಡ್ನಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಗುಲ್ಲೆಬ್ಬಿಸಲಾಗಿತ್ತು. ಲಸಿಕೆ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕಿದ್ದರು. ಇದನ್ನು ಸಮರ್ಪಕವಾಗಿ ಬಳಸಿಕೊಂಡ ಮೋದಿ ವಿರೋಧಿಗಳು ಲಸಿಕೆ ಬಗ್ಗೆ ಕುಹಕವಾಡಿದ್ದರು. ಈಗ ಲಸಿಕೆ ಅಸಲಿಯತ್ತು ತಿಳಿದ ವಿರೋಧಿಗಳು ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡಬೇಕೆಂದು ರಾಗ ಬದಲಿಸಿದ್ದಾರೆ.
ಲಸಿಕೆ ಕಂಡುಹಿಡಿದ ಆರಂಭದಲ್ಲಿ ಕೊರೋನಾ ವಾರಿಯರ್ಸ್ಗಳಿಗೆ ಲಸಿಕೆ ನೀಡಲಾಯಿತು. ಅನುಮಾನದಿಂದಲೇ ಲಸಿಕೆ ಪಡೆದ ಅವರು ಇಂದು ಆರೋಗ್ಯವಾಗಿದ್ದಾರೆ. ಬಳಿಕ 60 ವರ್ಷ ಕಳೆದ ಹಿರಿಯ ನಾಗರೀಕರಿಗೆ ಲಸಿಕೆ ನೀಡಲಾಯಿತು. ಕೆಲವರು ಮಾತ್ರ ಲಸಿಕೆ ಪಡೆದರು. ಆದರೆ ಬಹುತೇಕರು ಲಸಿಕೆ ಪಡೆಯಲು ಹಿಂಜರಿದರು. ಬಳಿಯ 45 ವರ್ಷ ಮೇಲ್ಪಟ್ಟ ನಾಗರೀಕರಿಗೆ ಲಸಿಕೆ ನೀಡಲಾಯಿತು. ಆಗಲು ಜನರಿಂದ ಇದೇ ಪ್ರತಿಕ್ರಿಯೆ.
ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವಂತೆ ಹೇಳಿದರೂ ಕಿವಿಗೆ ಹಾಕಿಕೊಳ್ಳದಿದ್ದ ಜನರು ಈಗ ಲಸಿಕೆ ಪಡೆಯಲು ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ. ಇದರಿಂದ ಲಸಿಕೆ ಪ್ರಮಾಣದಲ್ಲಿ ಕೊರತೆಯಾಗುತ್ತಿದೆ. ಮೇ 4 ರಂದು ಜಿಲ್ಲೆಗೆ 16 ಸಾವಿರ ಲಸಿಕೆ ಬಂದಿದೆ. ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲು ಇದನ್ನು ಬಳಸಲಾಗುತ್ತಿದೆ. ಬಳಿಕ ಮೊದಲ ಡೋಸ್ ಪಡೆಯುವವರಿಗೆ ನೀಡುವ ಉದ್ದೇಶವಿದೆ.
ಆದರೆ ಈವರೆಗೆ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದ ಜನರು ಈಗ ಮೊದಲ ಡೋಸ್ಗೆ ಮುಗಿಬೀಳುತ್ತಿದ್ದಾರೆ. 45 ವರ್ಷ ತುಂಬದವರೂ ಸಹ ಲಸಿಕೆ ಹಾಕಿಸಿಕೊಳ್ಳಲು ವೈದ್ಯರಿಂದ ಶಿಫಾರಸ್ಸು ಮಾಡಿಸುತ್ತಿದ್ದಾರೆ. ಕೊರೋನಾ ಪ್ರಕರಣಗಳ ಏರಿಕೆಯಿಂದ ಕಂಗಾಲಾದ ಜನರು ಲಸಿಕೆ ಪಡೆಯಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವನ್ನೂ ಮರೆತಿದ್ದಾರೆ.