ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಹಾವೇರಿ:
ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರೀಗ ಮಾವಿನಹಣ್ಣು ಮಾರುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಹೌದು, ತಾಲೂಕಿನ ಗಾಂಧೀಪುರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ.ಕೆ.ಪಾಟೀಲ ಎನ್ನುವವರು ಬುಧವಾರ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದೆದುರು ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿದ್ದುದು ಕಂಡುಬಂದಿತು.
ಈ ಸಂದರ್ಭ ಹೊಸ ದಿಗಂತ ಪ್ರತಿನಿಧಿ ಅವರನ್ನು ಮಾತಿಗಿಳಿದಾಗ, ಪ್ರಸಕ್ತ ಕೆಲಸದಿಂದ ಫೆಬ್ರುವರಿಯಲ್ಲಿನೇ ರಿಲೀವ್ ಮಾಡಿದ್ದಾರೆ. ಮಾಡುವುದಕ್ಕೆ ಕೆಲಸವಿಲ್ಲ, ಕುಟುಂಬ ನಿರ್ವಹಣೆಗಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಕಳೆದ ಒಂದು ವಾರದಿಂದ ಮಾವಿನಹಣ್ಣನ್ನು ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಫೆಬ್ರುವರಿ 28ರವರೆಗೆ ವೇತನ ನೀಡಿದ್ದಾರೆ. ಪ್ರತಿ ವರ್ಷ ಮಾರ್ಚ್ ಅಂತ್ಯದವರೆಗೂ ವೇತನ ನೀಡುತ್ತಿದ್ದರು, ಆದರೆ ಈ ವರ್ಷ ಮಾರ್ಚ್ ತಿಂಗಳ ವೇತನವನ್ನು ಇಂದಿನವರೆಗೂ ನೀಡಿರುವುದಿಲ್ಲ. ಮಿಡ್ ಟರ್ಮ್ ರಜೆ ರಿಲೀವ್ ಮಾಡುತ್ತಿರಲಿಲ್ಲ. ಈ ಸಂದರ್ಭ ಪರೀಕ್ಷೆಗಳನ್ನು ನಡೆಸುವುದಕ್ಕೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದೂ ಸೇರಿದಂತೆ ಇತರೆ ಕೆಲಸಗಳಿಗೆ ನಮ್ಮನ್ನೇ ಬಳಕೆ ಮಾಡಿಕೊಳ್ಳುತ್ತಿದ್ದುದರಿಂದ ಅತಿಥಿ ಉಪನ್ಯಾಸಕರಿಗೆ ಆರ್ಥಿಕ ಸಹಾಯವಾಗುತ್ತಿತ್ತು.
ಆದರೆ, ಈ ವರ್ಷ ಕೊರೋನಾ ಬಂದಿದ್ದರಿಂದ ಪ್ರ್ಯಾಕ್ಟಿಕಲ್ ಪರೀಕ್ಷೆಯನ್ನು ಮಾತ್ರ ನಡೆಸಲಾಗಿತ್ತು, ಲಿಖಿತ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದರಿಂದ ಈ ಸಮಸ್ಯೆಯಾಗಿದೆ. ಕುಟುಂಬ ನಿರ್ವಹಣೆಗಾಗಿ ಹಾವೇರಿಯಲ್ಲಿ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.