ಹೊಸ ದಿಗಂತ ವರದಿ, ಮೈಸೂರು:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಲಸಿಕಾ ಅಭಿಯಾನವನ್ನು ನಿರಂತರವಾಗಿ ನಡೆಸುತ್ತಿದ್ದು, ಜನರು ಲಸಿಕೆಯನ್ನು ಪಡೆಯುತ್ತಿರುವ ಕಾರಣ ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆಯಾಗಿದೆ ಎಂದು ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಹೇಳಿದರು.
ಶನಿವಾರ ಮೈಸೂರಿನ ಸಿದ್ಧಾರ್ಥ ಬಡಾವಣೆಯಲ್ಲಿರುವ ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕೃಷ್ಣರಾಜ ಕ್ಷೇತ್ರದಲ್ಲಿ ಎರಡನೇ ಡೋಸ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಮತ್ತು ಕೋವಿಡ್-3ನೇ ಅಲೆಯ ಬಗ್ಗೆ ಜಾಗೃತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕ ರೋಗ ಜಗತ್ತನ್ನೇ ವ್ಯಾಪಿಸಿದೆ ಕಂಡು ಕೇಳರಿಯದ ಆಘಾತಕಾರಿ ಸುದ್ಧಿಯನ್ನು ನೋಡುತ್ತಿದ್ದೇವೆ. ಹಿಂದೆ ನಮ್ಮ ಹಿರಿಯರು ಕಾಲರಾ, ಪ್ಲೇಗ್ ಬಂದಾಗ ಹೇಗೆ ತತ್ತರಿಸುತ್ತಿದ್ದರು ಎಂದು ಹೇಳುತ್ತಿದ್ದ ಮಾತನ್ನು ಕೇಳಿದ್ದೇವೆ. ಕೊರೋನಾ ಸೋಂಕು ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಾಗ ವಿಶೇಷವಾಗಿ ಪ್ರಧಾನಿ ನರೇಂದ್ರಮೋದಿ ಅವರು ಆಸಕ್ತಿಯನ್ನು ವಹಿಸಿ ಜನರನ್ನುದ್ದೇಶಿಸಿ ಮಾತನಾಡುವುದು, ಮಾರ್ಗದರ್ಶನ ಮಾಡಿದ್ದ ಕಾರಣಕ್ಕಾಗಿ, ಭಾರತದಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿರಲಿಲ್ಲ ಎಂದರು.
ಕೊರೋನಾ 2ನೇ ಅಲೆಯಲ್ಲಿ ಜನರ ಉದಾಸೀನತೆ , ತಾತ್ಸಾರತೆ ಕಾರಣದಿಂದಾಗಿ ಅನೇಕ ಸಾವು ನೋವುಗಳಾಗಿದ್ದನ್ನು ನೋಡಿದ್ದೇವೆ. ಜಗತ್ತಿನಾದ್ಯಂತ ಈ ಖಾಯಿಲೆ ನಿವಾರಣೆಗೆ ಕಂಡು ಕೊಂಡoತಹ ಮಾರ್ಗ ಎಂದರೆ ಲಸಿಕೆ. ಅಮೆರಿಕಾದಂತಹ ದೇಶದಲ್ಲಿ ಮತ್ತೆ ಕೊರೊನಾ ಜಾಸ್ತಿಯಾಗಿದೆ ಅದಕ್ಕೆ ಕಾರಣ ಅಲ್ಲಿನ ಕೆಲವು ಜನಗಳಲ್ಲಿ ವ್ಯಾಕ್ಸಿನ್ ಬಗೆಗೆ ಸಂಕುಚಿತ ಮನಸ್ಥಿತಿ ಇದೆ. ಭಾರತ ದೇಶದಲ್ಲಿ ವ್ಯಾಕ್ಸಿನ್ ನೀಡುವ ಸಂಖ್ಯೆ ಹೆಚ್ಚಾಗಿದೆ ಹಾಗಾಗಿ ಅದರ ಅಬ್ಬರ ಇಲ್ಲಿ ತಗ್ಗಿದೆ ಎಂದು ತಿಳಿಸಿದರು.
ಕೊರೋನಾ 3ನೇ ಅಲೆ ಹೆಚ್ಚಾಗಿ ಮಕ್ಕಳನ್ನು ಭಾದಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಮಕ್ಕಳಿಗೆ ಮನೆ ಆಹಾರವನ್ನು ಹಾಗೂ ಹಿಂದೆ ನಮ್ಮ ಹಿರಿಕರು ನೀಡುತ್ತಿದ್ದ ಆಹಾರವನ್ನು ನೀಡುವಲ್ಲಿ ಕಾರ್ಯಪ್ರವೃತ್ತವಾಗಬೇಕು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್, ನಗರಪಾಲಿಕಾ ಸದಸ್ಯೆ ರೂಪ , ತಾಲ್ಲೂಕು ವೈದ್ಯಾಧಿಕಾರಿ ಡಾ.ಮಹದೇವ್ ಪ್ರಸಾದ್, ಡಾ. ನಾಗರಾಜ್, ಬಿಜೆಪಿ ಕೆ.ಆರ್ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಪ್ರಮುಖರಾದ ಬಾಬು, ಮನು ಅಪ್ಪಿ(ಶೈವ) , ವಿನಯ್ ಪಾಂಚಜನ್ಯ ಮತ್ತಿತರರು ಹಾಜರಿದ್ದರು.