ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಹಾಸನ:
ಜಿಲ್ಲೆಯಲ್ಲೂ ಕೊರೊನಾ ಮಹಾಮಾರಿಯ ಕಬಂಧಬಾಹು ದಿನೇ ದಿನೆ ಆತಂಕಕಾರಿ ರೀತಿಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ.
ಶುಕ್ರವಾರ ಕೋವಿಡ್ ಇತಿಹಾಸದಲ್ಲಿಯೇ ಎರಡನೇ ಬಾರಿಗೆ ಅತಿ ಹೆಚ್ಚು ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಇದಕ್ಕೆ ಕಾರಣ.
ಶುಕ್ರವಾರ ಒಂದೇ ದಿನ 2540 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ಕೇವಲ 14 ದಿನಗಳ ಅಂತರದಲ್ಲಿ ಬರೋಬ್ಬರಿ 21 ಸಾವಿರ ಕೇಸ್ ವರದಿಯಾಗಿವೆ. ಇದನ್ನು ನೋಡಿದರೆ ಅರೆ ಮಲೆನಾಡು ಡೆಡ್ಲೀ ವೈರಸ್ ಹಾಟ್ಸ್ಪಾಟ್ ಆಗುತ್ತಿದೆಯೇ ಎಂಬ ಆತಂಕ ಸೃಷ್ಟಿಸಿದೆ.
ಹಿಂದೆಲ್ಲಾ ಜಿಲ್ಲೆಯಲ್ಲಿ 100, 200 ಪಾಸಿಟಿವ್ ಕೇಸ್ ವರದಿಯಾದರೆ ಅದೇ ಹೆಚ್ಚು ಎಂದು ಎಲ್ಲರೂ ಹೌಹಾರುತ್ತಿದ್ದರು. ಆದರೀಗ ತಾಲೂಕೊಂದರಲ್ಲೇ 400 ರಿಂದ 600 ಕೇಸ್ ದೃಢಪಡುತ್ತಿವೆ.
ಶುಕ್ರವಾರ ರ ಆಲೂರು ತಾಲೂಕಿನಲ್ಲಿ 141, ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರೆ, ಅರಕಲಗೂಡು 223, ಅರಸೀಕೆರೆ 316,ಬೇಲೂರು 315, ಚನ್ನರಾಯಪಟ್ಟಣ 484, ಹಾಸನ 670, ಹೊಳೆನರಸೀಪುರ 231, ಸಕಲೇಶಪುರ 144 ಮತ್ತು ಇತರೆ ಜಿಲ್ಲೆಯ 16 ಪ್ರಕರಣ ಸೇರಿವೆ. ಸಕ್ರಿಯ ಪ್ರಕರಣ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗುತ್ತಿದ್ದು, ಮೇ 07 ರಂದು 13,482 ಮಂದಿಯಲ್ಲಿ ಆಕ್ಟೀವ್ ಇರುವುದು ಗೊತ್ತಾಗಿದೆ. 105 ಮಂದಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ಬರೋಬ್ಬರಿ 20 ಮಂದಿ ಡೆಡ್ಲೀ ವೈರಸ್ಗೆ ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 660 ಕ್ಕೆ ಏರಿಕೆಯಾಗಿದ್ದು, ಕಳೆದ ೧೪ ದಿನಗಳ ಅಂತರದಲ್ಲಿ 193 ಮಂದಿ ಜೀವ ಕಳೆದುಕೊಂಡಿದ್ದಾರೆ.