ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಚಿತ್ರದುರ್ಗ:
ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ವತಿಯಿಂದ ಸೆಪ್ಟೆಂಬರ್ 10 ರಿಂದ ಅಕ್ಟೋಬರ್ 02 ರವರೆಗೆ ಹಿಂದೂ ಮಹಾ ಗಣಪತಿ ಮಹೋತ್ಸವ ಆಚರಿಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ – ಬಜರಂಗದಳ ಶಿವಮೊಗ್ಗ ವಿಭಾಗೀಯ ಸಂಚಾಲಕ ಪ್ರಭಂಜನ್ ತಿಳಿಸಿದರು.
ನಗರದ ಸಮಾಜ ಕಲ್ಯಾಣ ಇಲಾಖೆ ಪಕ್ಕದ ಜಾಗದಲ್ಲಿ ನಿರ್ಮಿಸಿರುವ ಗಣಪತಿ ಪೆಂಡಾಲ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಗಣಪತಿ ಮಹೋತ್ಸವ ನಡೆಸಲಾಗುತ್ತಿದೆ. ಪ್ರತಿದಿನ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಜಾಗೃತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೊರೋನಾ ಹಿನ್ನೆಲೆಯಲ್ಲಿ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಎಲ್ಲವೂ ಸರಿಯಾಗಿ ಸಹಜ ಸ್ಥಿತಿಗೆ ಮರಳಬೇಕೆಂಬ ಹಂಬಲ ಎಲ್ಲರಲ್ಲೂ ಇದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಪೂರಕವಾಗಿ ಗಣಪತಿ ಉತ್ಸವದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಇಲ್ಲಿ ವ್ಯಾಕ್ಸಿನೇಷನ್ ಸೆಂಟರ್ ಆರಂಬಿಸಲಾಗುವುದು. ಜನರಿಗೆ ಕೊರೋನಾ ಸೋಂಕಿನ ಕುರಿತು ಜಾಗತಿ ಮೂಡಿಸಲಾಗುವುದು. ಆರ್ಥಿಕ ಚೇತರಿಗೆ ಬಗ್ಗೆ ತಜ್ಞರಿಂದ ವಿಚಾರ ಗೋಷ್ಠಿ ನಡೆಸಲಾಗುವುದು. ಆ ಮೂಲಕ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲಾಗುವುದು ಎಂದರು.
ಈ ಬಾರಿ ಗಣೇಶೋತ್ಸವ ಕುರಿತು ರಾಜ್ಯ ಸರ್ಕಾರ ನಿರ್ಬಂಧ ಹಾಕಿರುವುದು ಸರಿಯಲ್ಲ. ಇಂತಿಷ್ಟ ಎತ್ತರದ ಗಣಪತಿ ಕೂರಿಸಬೇಕು. ಕೇವಲ ಐದು ದಿನಗಳು ಮಾತ್ರ ಆಚರಣೆ ಮಾಡಬೇಕು ಎಂಬಿತ್ಯಾಧಿ ನಿಬಂಧನೆಗಳನ್ನು ಹಾಕಲಾಗಿದೆ. ರಾಜಕೀಯ ಕಾರ್ಯಕ್ರಮಗಳಲ್ಲಿ ಸಾಕಷ್ಟು ಜನರು ಸೇರುತ್ತಿದ್ದಾರೆ. ಚರ್ಚ್, ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಶಾಲಾ, ಕಾಲೇಜುಗಳು ಆರಂಭವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕೇವಲ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧ ಹೇರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ನಮಗೂ ಸಮಾಜದ ಬಗ್ಗೆ ಕಳಕಳಿ ಇದೆ. ಹಾಗಾಗಿ ಕೊರೋನಾ ಸಂದರ್ಭದಲ್ಲಿ ರೋಗಿಗಳಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ರಕ್ತದಾನ ಶಿಬಿರಗಳನ್ನು ಮಾಡಲಾಗಿದೆ. ಹೆಚ್ಚಿನ ಜನಸಂದಣಿ ಸೇರಬಾರದು, ಕೊರೋನಾ ನಿಯಮಗಳನ್ನು ಪಾಲಿಸಬೇಕು ಎಂಬುದು ಸರಿ. ಅದರಂತೆ ನಾವು ನಿಯಮಗಳನ್ನು ಪಾಲಿಸಲು ಸಿದ್ಧರಿದ್ದೇವೆ. ಹಾಗಾಗಿ 21 ದಿನಗಳ ಕಾಲ ಗಣಪತಿ ಉತ್ಸವ ಆಚರಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ವಿಪುಲ್ ಜೈನ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಗಣೇಶ ಮಹೋತ್ಸವ ನಡೆಸಲಾಗುತ್ತಿದೆ. ಕಳೆದ ವರ್ಷಗಳಂತೆ ಈಗಲೂ ಕೊರೋನಾ ನಿಯಮಾವಳಿಗಳನ್ನು ತಪ್ಪದೇ ಅನುಸರಿಸಲಾಗುವುದು. ಜನರದಲ್ಲಿ ಒಗ್ಗಟ್ಟು ಮೂಡಿಸುವುದು, ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂಬ ಉದ್ದೇಶದಿಂದ ಉತ್ಸವ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಪೂಜಾ ಕಾರ್ಯಕ್ರಮ ನಡೆಯಲಿದೆ. ಇದನ್ನು ರಾಜಕೀಯವಾಗಿ ನೋಡುವುದು ಬೇಡ. ಇದೊಂದು ಸಾಮಾಜಿಕ, ಧಾರ್ಮಿಕ ಉತ್ಸವ ಎಂದರು.
ಉತ್ಸವ ಸಮಿತಿ ಕಾರ್ಯದರ್ಶಿ ಶರಣ್ಕುಮಾರ್ ಮಾತನಾಡಿ, ಕಳೆದ ವರ್ಷದಂತೆ ಕೊರೋನಾ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುವುದು. ಸಾಮಾಜಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ನಿಯಮಗಳ ಬಗ್ಗೆ ಗಮನ ನೀಡಲಾಗುವುದು. ಉತ್ಸವದ ಸಂದರ್ಭದಲ್ಲಿ ಕೊರೋನಾ ನಿಯಮಗಳಿಗೆ ಯಾವುದೇ ಭಂಗವಾಗದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಜಿಲ್ಲಾ ಸಂಯೋಜಕ ಪ್ರದೀಪ್, ನಗರ ಸಂಚಾಲಕ ರಂಗಸ್ವಾಮಿ
ಮತ್ತಿತರರು ಹಾಜರಿದ್ದರು.