Thursday, August 11, 2022

Latest Posts

ಕೊರೋನಾ ಎರಡನೇ ಅಲೆ: ಜಿಂದಾಲ್ ಕಾರ್ಖಾನೆಯ ಕಾರ್ಮಿಕರ ಬಗ್ಗೆ ನಿಗಾ ಇರಲಿ: ಜಿಲ್ಲಾಧಿಕಾರಿಗೆ ಮನವಿ

ಹೊಸದಿಗಂತ ವರದಿ, ಬಳ್ಳಾರಿ:

ಕಳೆದ ಸುಮಾರು ತಿಂಗಳಿಂದ ರಾಜ್ಯದಲ್ಲಿ ಕೊರೋನಾ ಅಬ್ಬರಿಸಿ, ನಂತರ ಕಡಿಮೆಯಾಗುವಷ್ಟರಲ್ಲೇ ಮತ್ತೆ ಎರಡನೇ ಅಲೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ‌ ಮತ್ತೆ ವಾರದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕೂಡಲೇ ಜಿಂದಾಲ್ ಕಾರ್ಮಿಕರು ಸೇರಿದಂತೆ ಎಲ್ಲ ಕಡೆಗಳಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯ ಸಮೀತಿ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಕೆ.ಎರಿಸ್ವಾಮೀ ಅವರು ಮಾತನಾಡಿ, ಪ್ರಮುಖವಾಗಿ ದಕ್ಷಿಣ ಭಾರತದಲ್ಲೇ ಅತಿದೊಡ್ಡ ಕಾರ್ಖಾನೆಯಾಗಿರುವ ಜಿಂದಾಲ್ ಸೇರಿದಂತೆ ವಿವಿಧ ಕಾರ್ಖಾನೆಗಳಲ್ಲಿ ಅಂತಾರಾಜ್ಯ ಕಾರ್ಮಿಕರು ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಕಡ್ಡಾಯವಾಗಿ ಎಲ್ಲರನ್ನೂ ಕರೋನಾ ತಪಾಸಣೆ ಮಾಡಿಸುವುದು ಕಡ್ಡಾಯಗೊಳಿಸಬೇಕು. ಇದರ ಜೊತೆಗೆ ಎಲ್ಲ ಕಡೆಗಳಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ನೆಪಕ್ಕೆ ತಾಸಣೆಯಾಗಬಾರದು, ನಿರ್ಲಕ್ಷಿಸಿದರೇ ಮತ್ತೆ ಬಳ್ಳಾರಿ ಅಧೋಗತಿಗೆ ಬರಲಿದೆ ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ನಿರ್ಲಕ್ಷಿಸಿದರೆ ಕಳೆದ ವರ್ಷ ಜಿಲ್ಲೆ ಆಗಿರುವ ಅನಾಹುತಗಳನ್ನು ಎದುರಿಸಬೇಕಾಗಲಿದೆ. ಜಿಂದಾಲ್ ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಮಹಾಮಾರಿ ಕೊರೋನಾ ಜಿಲ್ಲೆಯಲ್ಲಿ ಅಟ್ಟಹಾಸ ಮೆರೆದು ಸುಮಾರು ಜನರು ಪ್ರಾಣ ಕಳೆದು ಕಳೆದುಕೊಂಡ ಉದಾಹರಣೆಗಳಿವೆ.

ಮಾನವನ ಅಂತ್ಯಕ್ಕೆ ಕೆನ್ನಾಲಿಗೆ ಚಾಚಿರುವ ಈ ಮಹಮಾರಿ ಕೊರೋನಾ ದಾಳಿಯಿಂದ ಇಡೀ ಜಗತ್ತೇ ತಲ್ಲಣಗೊಂಡಿದೆ. ಇಂತಹದರ ಮಧ್ಯೆ ಮತ್ತೆ ಜಿಲ್ಲೆಯಲ್ಲಿ ಸೊಂಕಿತ ಪ್ರಕರಣಗಳು ಕಂಡು ಬರುತ್ತಿರುವುದು ಜನರಲ್ಲಿ ಭೀತಿ ಸೃಷ್ಟಿಸಿದೆ. ಈಗಾಗಲೇ ಕೊರೋನಾದಿಂದ ಜನರಿಗೆ ನಾನಾ ಸಮಸ್ಯೆಗಳು ಎದುರಾಗಿದ್ದು, ಇದರ ಜೊತೆಗೆ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡು ಮೂಲೆ ಸೇರಿದ್ದಾರೆ. ಸಾಕಷ್ಟು ಜನ ಕೂಲಿ ಕಾರ್ಮಿಕರು ಒಪ್ಪತ್ತಿನ ಆಹಾರಕ್ಕೆ ಪರದಾಡುವಂತಾಗಿದೆ.

ಇದೀಗ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಪ್ರಾಥಮಿಕ ಹಂತದಲ್ಲೇ ಅದನ್ನು ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಬೇಕು. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಈ ಮಹಾಮಾರಿ ರೋಗವನ್ನು ಕಟ್ಟಿ ಹಾಕುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ‌ ನಿರ್ದೇಶನ ನೀಡಬೇಕು, ನಿರ್ಲಕ್ಷ್ಯವಹಿಸಿದರೇ ಅದೇ ಭೀಕರ ದೃಶ್ಯಗಳು ಮರುಕಳಿಸುವುದರಲ್ಲಿ ಅನುಮಾನವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜನಸೈನ್ಯದ ಎಂ.ಚೆಂಚಯ್ಯ, ಉತ್ತರ ಕರ್ನಾಟಕದ ಉಪಾಧ್ಯಕ್ಷ ಫಯಾಜ್ ಭಾಷ, ನಾಸೀರ್ ಫಾರೂಕ್, ಮಂಜುನಾಥ್, ಗೋವಿಂದ, ಆಯೇಷಾ ಸಿದ್ದಿಕಿ, ಇಬ್ರಾಹಿಂ ಸೇರಿದಂತೆ ಇತರರು ಉಪಸ್ಥಿತಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss