ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಎರಡನೇ ಅಲೆಯಲ್ಲಿ ವಿವಿಧ ರೂಪಾಂತರಗಳನ್ನು ಹೊಂದುತ್ತಿರುವ ಕೊರೋನಾ ವೈರಾಣು ಅಟ್ಟಹಾಸದಲ್ಲಿ ಹರಡುವಿಕೆ ಮತ್ತು ಸಾವಿನ ಪ್ರಮಾಣಗಳೆರಡೂ ಹೆಚ್ಚಾಗುತ್ತಿದೆ. ಅಚ್ಚರಿ ಎಂದರೆ ಕೊರೋನಾ ಅಪಾಯದ ಬಗ್ಗೆ ಶೇ.90ರಷ್ಟು ಜನರಿಗೆ ಅರಿವಿದ್ದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿರುವವರು ಕೇವಲ ಶೇ.44ರಷ್ಟು ಮಾತ್ರ ಎಂಬುದು ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಇದರಿಂದ ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡುವಿಕೆ ಮತ್ತು ಜೀವಹಾನಿಗೆ ಕಾರಣವಾಗುತ್ತಿದೆ .
ಕೊರೋನಾ ಕುರಿತ ಜನಜಾಗೃತಿ ಹಾಗೂ ಜನ ನಿಯಮಗಳನ್ನು ಪಾಲಿಸುತ್ತಿರುವುದರ ಬಗ್ಗೆ ‘ಏಕ್ ದೇಶ್’ ನ ಭಾಗವಾಗಿರುವ ‘ಅಪ್ನಾ ಮಾಸ್ಕ್ ’ಅಧ್ಯಯನ ನಡೆಸಿದ್ದು, ಕೊರೋನಾ ತಡೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ, ಅಪಾಯದ ಬಗ್ಗೆ ದೇಶದ ಶೇ.90ರಷ್ಟು ಮಂದಿಗೆ ಸ್ಪಷ್ಟವಾದ ತಿಳುವಳಿಕೆ ಇದೆ. ಆದರೆ ಈ ಪೈಕಿ ಮಾಸ್ಕ್ ಧರಿಸುತ್ತಿರುವವರು ಶೇ.44 ರಷ್ಟು ಮಂದಿ ಮಾತ್ರ ಎಂದು ಈ ಅಧ್ಯಯನ ಹೇಳಿದೆ.
ಜನರು , ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ,ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಳ್ಳುತ್ತಿರುವ ಹೊರತಾಗಿಯೂ , ಈ ಬಗ್ಗೆ ಸಾಕಷ್ಟು ಜಾಗೃತೆ ವಹಿಸುತ್ತಿಲ್ಲ, ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆಘಾತಕಾರಿ ಮಾಹಿತಿ ಅಧ್ಯಯನದಲ್ಲಿ ವ್ಯಕ್ತವಾಗಿದೆ.ಹೆಚ್ಚಿನವರು ನೆಪಮಾತ್ರಕ್ಕೆ ಮಾಸ್ಕ್ನ್ನು ಧರಿಸಿದರೂ ಸರಿಯಾಗಿ ಧರಿಸುವ ಬದಲು “ಗಲ್ಲದ ರಕ್ಷಣೆ”ಎಂಬಂತೆ ಹಾಕಿಕೊಳ್ಳುವ ಮೂಲಕ ತಮ್ಮ ಸುರಕ್ಷತೆಯನ್ನು ನಿರ್ಲಕ್ಷಿಸುತ್ತಿರುವುದು ಮಾತ್ರವಲ್ಲದೆ ಬೇರೆಯವರನ್ನೂ ಅಪಾಯಕ್ಕೆ ತಳ್ಳುತ್ತಿದ್ದಾರೆ ಎನ್ನುತ್ತದೆ ವರದಿ.
ಇದೊಂದು ಸಮಾಜವಿರೋಧಿ ಮಾನಸಿಕತೆ
ಕೊರೋನಾ ಪಿಡುಗಿನ ಬಗ್ಗೆ ಇಷ್ಟೆಲ್ಲ ಅರಿವಿದ್ದೂ ನಿರ್ಲಕ್ಷ್ಯ ತೋರುವವರ ಮಾನಸಿಕತೆಯ ಬಗ್ಗೆ ಕೊಲಂಬಿಯಾ ಏಷ್ಯಾ, ಗುರು ಗ್ರಾಮದ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಶ್ವೇತಾ ಶರ್ಮಾ ಅವರು ವಿಶ್ಲೇಷಿಸಿದ್ದು, ಇದೊಂದು ಸಮಾಜವಿರೋ , ಸ್ವಾರ್ಥ, ವಿಛಿದ್ರಮನಸ್ಕ (ಸ್ಕಿಜೋಟೈಪಲ್ ) ಮಾನಸಿಕತೆ ಎನ್ನುತ್ತಾರೆ.ಈ ರೀತಿಯ ನಡವಳಿಕೆ ಹೊಂದಿರುವ ವ್ಯಕ್ತಿತ್ವದವರು ಸಾಮಾನ್ಯ ಅಗತ್ಯ ನಿಯಮಗಳನ್ನೂ ಪಾಲಿಸುವುದಿಲ್ಲ . ಮಾತ್ರವಲ್ಲ ಹೇಳಲಾಗುವ ಪ್ರತಿಯೊಂದು ಸೂಚನೆಯನ್ನೂ ಅನುಮಾನದಿಂದ ನೋಡುತ್ತಾರೆ ಎಂದೂ ಅವರು ವಿವರಿಸುತ್ತಾರೆ .
ಇನ್ನು ಶೇ.45ರಷ್ಟು ಮಂದಿಯಲ್ಲಿ ಸಮಾಜಿಕ ಅಂತರವಷ್ಟೇ ಸಾಕು, ಮಾಸ್ಕ್ ಏಕೆ ಬೇಕು ?ಎಂಬ ಮನಸ್ಥಿತಿ ಇದೆ.ಕೆಲವು ಮಂದಿ ಮಾಸ್ಕ್ ಗಳನ್ನು ಧರಿಸದೇ ಇರುವುದಕ್ಕೆ ಇದೂ ಒಂದು ಕಾರಣವಾಗಿದೆ. ಇಂತಹ ಮಾನಸಿಕತೆ ಹೆಚ್ಚಾಗಿ 26-35 ವಯಸ್ಸಿನವರಲ್ಲಿ ಕಾಣುತ್ತಿದೆ ಎಂದು ಅಧ್ಯಯನ ಬೊಟ್ಟು ಮಾಡಿದೆ .
ಹಾಗೆಯೇ ಮತ್ತೋರ್ವ ವೈದ್ಯೆ ಡಾ. ಪ್ರೀತಿ ಸಿಂಗ್ ಅವರು ಹೇಳುವಂತೆ, ಅಪಾಯ ಮೈಮೇಲೆ ಎಳೆದುಕೊಳ್ಳುವ ನಡವಳಿಕೆ, ಇತರರ ಬಗ್ಗೆ ಕಾಳಜಿ-ವಿವೇಚನೆ ಇಲ್ಲದಿರುವ, ಅನಾಹುತ ನಡೆದ ಬಳಿಕವೂ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲದೇ ಇರುವ ಅಥವಾ ಸಮಾಜ ವಿರೋಧಿ ಕೃತ್ಯದ ಮನಸುಳ್ಳವರು ಮಾಸ್ಕ್ಗಳನ್ನು ಧರಿಸದೆ ಇರುವುದು ಕೂಡಾ ಗಮನಾರ್ಹ.
ಆದರೆ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಭಾಗದಲ್ಲಿ ಮಾತ್ರ ಕೆಲವು ಮಂದಿ ನಿಜವಾಗಿಯೂ ಮಾಹಿತಿಯ ಕೊರತೆಯಿಂದ ಮಾಸ್ಕ್ ಧರಿಸದೇ ಇರುವ ಉದಾಹರಣೆಗಳೂ ಇವೆ ಎನ್ನುತ್ತಾರೆ ಅಧ್ಯಯನಕಾರರು.
ಆದರೆ ಅಧ್ಯಯನದಲ್ಲಿ ಕಂಡುಬಂದ ಇನ್ನೊಂದು ಗಮನಾರ್ಹ ಅಂಶವೆಂದರೆ, 36-55 ವರ್ಷದವರು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಮಾಸ್ಕ್ ಧರಿಸಿ ಸುರಕ್ಷಿತವಾಗಿರಲು ಯತ್ನಿಸುತ್ತಿರುವುದು. ಭಾರತದಲ್ಲಿ ಕಂಡುಬರುತ್ತಿರುವ ಈ ಮಾನಸಿಕತೆ ಬ್ರೆಜಿಲ್ ನ ಸ್ಟೇಟ್ ಯೂನಿವರ್ಸಿಟಿ ಆಫ್ ಲೋಂಡ್ರಿನಾದಲ್ಲಿ ನಡೆದ ಸಂಶೋಧನೆಯಲ್ಲೂ ಕಂಡುಬಂದಿದೆ.
ಅನೇಕರು ಮಾಸ್ಕ್ ಧರಿಸುವುದನ್ನು ಒಂದು ಕಿರಿಕಿರಿ ಎಂದು ಭಾವಿಸುತ್ತಿರುವುದು ಮಾತ್ರವಲ್ಲದೆ ತಮ್ಮ ಸ್ವಾತಂತ್ರ್ಯಕ್ಕೆ ಅಡ್ದಿ ಎಂಬ ರೀತಿಯಲ್ಲೂ ಭಾವಿಸುತ್ತಿರುವುದು ಕಂಡುಬಂದಿದೆ. ಇತರ ಕೆಲವರು ಕೊರೋನಾದಿಂದ ಭೀತಿಗೊಳಗಾಗಿರುವ ಹಿನ್ನೆಲೆಯಲ್ಲಿ , ಈ ಕುರಿತಂತೆ ಹೆಚ್ಚು ಮಾಹಿತಿ-ಅರಿವು ಹೊಂದುವುದರಿಂದಲೇ ದೂರವಿರುವುದು ಕೂಡಾ ಕಂಡುಬಂದಿದೆ. ಕೊರೋನಾ ಎಂಬುದೇ ಇಲ್ಲ ಎಂಬಂತೆ ಭಾವಿಸಿದರೆ ಆತಂಕಕ್ಕೊಳಗಾಗುವ ಪ್ರಮೇಯ ಇಲ್ಲ ಎಂಬುದು ಇಂತಹವರ ಮನಸ್ಥಿತಿಯಾಗಿದೆ. ಕೊರೋನಾ ನಿಯಂತ್ರಣದಲ್ಲಿ ಸೂಚಿಸಲಾಗಿರುವ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದ್ದು, ಇದನ್ನು ಪಾಲಿಸದೆ ಇರುವವರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸಬೇಕೆನ್ನುತ್ತಾರೆ ತಜ್ಞರು.