ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ರಾಜ್ಯದಲ್ಲಿ ಹೊಸ ನಿರ್ಬಂಧಗಳನ್ನು ವಿಧಿಸಿದ್ದಾರೆ. ಎಲ್ಲಾ ಮಾರುಕಟ್ಟೆಗಳು, ಚಿಲ್ಲರೆ ವ್ಯಾಪಾರಿಗಳು ಮತ್ತು ಅಂಗಡಿಗಳು ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರವರೆಗೆ ಮತ್ತು ಸಂಜೆ 5 ರಿಂದ ಸಂಜೆ 7 ರವರೆಗೆ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇನ್ನು ಸ್ಥಳೀಯ ರೈಲುಗಳ ಸಂಚಾರವನ್ನು ನಾಳೆ (ಮೇ 6) ರಿಂದ ಸ್ಥಗಿತಗೊಳಿಸಲಾಗುವುದು. ಕೋಲ್ಕತಾ ಮೆಟ್ರೋ ಸೇರಿದಂತೆ ರಾಜ್ಯ ಸಾರಿಗೆ ಕೇವಲ 50 ಶೇಕಡಾ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಕೊವಿಡ್ ಪರಿಸ್ಥಿತಿಯನ್ನು ನೋಡಿದರೆ, ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮಮತಾ ಹೇಳಿದ್ದು , ರಾಜ್ಯದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.ರಾಜ್ಯ ಸರ್ಕಾರಿ ಕಚೇರಿಗಳು ಈಗ ಕೇವಲ 50 ಪ್ರತಿಶತದಷ್ಟು ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಖಾಸಗಿ ಕಚೇರಿಗಳಿಗೆ, ಶೇಕಡಾ 50 ರಷ್ಟು ಸಿಬ್ಬಂದಿಗೆ ಮನೆಯಿಂದ ಕೆಲಸ ಕಡ್ಡಾಯವಾಗಿದೆ.
ಶಾಪಿಂಗ್ ಕಾಂಪ್ಲೆಕ್ಸ್ಗಳು , ಜಿಮ್ಗಳು, ಸಿನೆಮಾ ಹಾಲ್ಗಳು, ಬ್ಯೂಟಿ ಪಾರ್ಲರ್ಗಳು ಇತ್ಯಾದಿಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಬ್ಯಾಂಕುಗಳು ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದ್ದು, ಜ್ಯುವೆಲ್ಲರಿಗಳು ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರಬಹುದು. ಮನೆಗಳಿಗೆ ಹೋಮ್ ಡೆಲಿವರಿ ಇರಲಿದೆ.
ಸಾಮಾಜಿಕ ಮತ್ತು ರಾಜಕೀಯ ಸಭೆ ಸಮಾರಂಭಗಳ ಮೇಲೆ ನಿಷೇಧ ಹೇರಲಾಗುವುದು. ಪ್ರಯಾಣಿಕರು ಪ್ರಯಾಣದ ವೇಳೆ ಆರ್ಟಿ- ಪಿಸಿರ್ ನೆಗೆಟಿವ್ ವರದಿ ಒಯ್ಯುವುದು ಕಡ್ಡಾಯ. ಮೇ 7 ರಿಂದ, 72 ಗಂಟೆಗಳ ಅವಧಿಯಲ್ಲಿ ಪಡೆದಿರುವ ಆರ್ ಟಿ ಪಿಸಿ ಆರ್ ನೆಗೆಟಿವ್ ವರದಿ ಇಲ್ಲದೆ ಯಾರೂ ವಿಮಾನ ನಿಲ್ದಾಣಗಳಿಗೆ ಬರಲು ಅನುಮತಿಸುವುದಿಲ್ಲ ಕೊವಿಡ್ ಪಾಸಿಟಿವ್ ಇರುವವವರನ್ನು ವಿಮಾನ ನಿಲ್ದಾಣ ಪ್ರಾಧಿಕಾರವು ಏರ್ಪಡಿಸಿರುವ 14 ದಿನಗಳ ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗುವುದು .
ಅಂತಾ ರಾಜ್ಯ ಬಸ್ಗಳಲ್ಲಿ ತಪಾಸಣೆ ಮಾಡಲಾಗುವುದು. ಅಂತಹ ಪ್ರಯಾಣಿಕರಿಗೆ 72 ಗಂಟೆಗಳ ಅವಧಿಯಲ್ಲಿ ಪಡೆದ ಆರ್ಟಿ- ಪಿಸಿರ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಈ ತೀರ್ಪು ರೈಲು ಸೇವೆಗಳ ಪ್ರಯಾಣಿಕರಿಗೂ ಅನ್ವಯಿಸುತ್ತದೆ ಎಂದು ಅವರು ಹೇಳಿದರು. ಕೊವಿಡ್ ಲಸಿಕೆಯ ಮೊದಲ ಡೋಸ್ ನೀಡುವವರೆಗೆ ವ್ಯಾಪಾರಿಗಳು, ಸಾಗಣೆದಾರರು ಮತ್ತು ಪತ್ರಕರ್ತರಿಗೆ ಆದ್ಯತೆ ನೀಡಲಾಗುವುದು.