ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಲಸಿಕೆ ಅಭಿಯಾನವು ನ್ಯಾಯಸಮ್ಮತ, ತಾರತಮ್ಯರಹಿತ ವಿಧಾನದಲ್ಲಿದ್ದು, ಅತಿಯಾದ ನ್ಯಾಯಾಂಗ ಹಸ್ತಕ್ಷೇಪವು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.
ಕೊರೋನಾ ಲಸಿಕೆ ಅಭಿಯಾನದ ಬಗ್ಗೆ ಸುಪ್ರೀಂ ಕೋರ್ಟ್ ಎತ್ತಿರುವ ಅಂಶಗಳಿಗೆ ಪ್ರತಿಕ್ರಿಯೆ ನೀಡಿ ಸಲ್ಲಿಸಿರುವ ಅಫಿಡವಿಟ್ಟಿನಲ್ಲಿ ಕೇಂದ್ರ ಸರ್ಕಾರ, ಈಗಿನ ಕೊರೋನಾ ಪರಿಸ್ಥಿತಿಯಲ್ಲಿ ಒಂದೇ ಹಂತದಲ್ಲಿ ದೇಶದಲ್ಲಿ ಎಲ್ಲರಿಗೂ ಲಸಿಕೆ ನೀಡಲು ಸಾಧ್ಯವಿಲ್ಲ. ಅಲ್ಲದೆ ಲಸಿಕೆ ಡೋಸ್ ಗಳ ಪೂರೈಕೆಯಲ್ಲಿ ವ್ಯತ್ಯಯವಿದೆ, ಅದರ ಲಭ್ಯತೆ ಕೂಡ ಕಾರಣವಾಗಿದೆ ಎಂದು ಹೇಳಿದೆ.
ಕೊರೋನಾ ಹತ್ತಿಕ್ಕಲು ಅಗತ್ಯ ಸೇವೆ, ವೈದ್ಯಕೀಯ ಸೌಲಭ್ಯಗಳ ಪೂರೈಕೆ ಕುರಿತು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಅರ್ಜಿಯನ್ನು ಕೈಗೆತ್ತಿಕೊಂಡಿತ್ತು. ದೇಶದಲ್ಲಿ ಈಗ ಮತ್ತು ಸದ್ಯದ ಭವಿಷ್ಯದಲ್ಲಿ ಆಕ್ಸಿಜನ್ ಪೂರೈಕೆಯ ಅಂದಾಜು ಪೂರೈಕೆ, ತೀವ್ರ ತೊಂದರೆಯಲ್ಲಿರುವ ರಾಜ್ಯಗಳಿಗೆ ಹೇಗೆ ಆಕ್ಸಿಜನ್ ಹಂಚಿಕೆ ಮಾಡುತ್ತದೆ ಮತ್ತು ನಿರಂತರವಾಗಿ ಪೂರೈಕೆಯಾಗಲು ಕಾರ್ಯತಂತ್ರವನ್ನು ಹೇಗೆ ನಿಗಾವಹಿಸುತ್ತದೆ ಎಂದು ಕೇಂದ್ರ ಸರ್ಕಾರವನ್ನು ಕೇಳಿತ್ತು.
ಲಸಿಕೆ ನೀತಿಯು ಸಂವಿಧಾನದ ವಿಧಿ 14 ಮತ್ತು ಸಂವಿಧಾನ ವಿಧಿ 21 ರ ಆದೇಶಕ್ಕೆ ಅನುಗುಣವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಹಲವಾರು ಸುತ್ತಿನ ಸಮಾಲೋಚನೆ ಮತ್ತು ತಜ್ಞರೊಂದಿಗೆ ಚರ್ಚಿಸಿದ ನಂತರ ಇದನ್ನು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ರಾಜ್ಯ ಸರ್ಕಾರಗಳು ಮತ್ತು ಲಸಿಕೆ ತಯಾರಕರು ಈ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ನ್ಯಾಯಾಲಯದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ,ಅತಿಯಾದ ನ್ಯಾಯಾಂಗ ಹಸ್ತಕ್ಷೇಪದಿಂದ ತಜ್ಞರ ಸಲಹೆ ಅಥವಾ ಆಡಳಿತಾತ್ಮಕ ಅನುಭವದ ಅನುಪಸ್ಥಿತಿಯಲ್ಲಿ ಅನಿರೀಕ್ಷಿತ ಮತ್ತು ಅನಪೇಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಕೇಂದ್ರ ಸರ್ಕಾರ ತನ್ನ 200 ಪುಟಗಳ ಅಫಿಡವಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಗೆ ವಿವರಿಸಿದೆ.