ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಕೊರೋನಾ ಎರಡನೇ ಅಲೆಯ ಲಾಕ್ಡೌನ್ ನಂತರ ವೀಕೆಂಡ್ ಪ್ರವಾಸಿಗರಿಗೆ ಮೊದಲ ಬಾರಿಗೆ ತೆರೆದುಕೊಂಡಿರುವ ಜಿಲ್ಲೆಯ ಪ್ರವಾಸಿ ತಾಣಗಳು ಶನಿವಾರ ಜನರಿಂದ ತುಂಬಿ ತುಳುಕಿವೆ.
ಗಿರಿಶ್ರೇಣಿಯನ್ನು ಆವರಿಸಿಕೊಂಡಿದ್ದ ಮೋಡ ಮುಸುಕಿದ ವಾತಾವರಣ, ಆಗಾಗ ತುಂತುರು ಮಳೆ, ಕುಳಿರ್ಗಾಳಿಯನ್ನೊಳಗೊಂಡ ಆಹ್ಲಾದಕರ ವಾತಾವರಣದಲ್ಲಿ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದ್ದು ಕಂಡುಬಂತು. ಎಷ್ಟೋದಿನಗಳ ಬಂಧನದಿಂದ ಬಿಡುಗಡೆಗೊಂಡವರಂತೆ ಭಾವ ಕಾಣುತ್ತಿತ್ತು.
ಕೊರೋನಾದ ಆತಂಕ ಇನ್ನೂ ದೂರವಾಗಿಲ್ಲದ ಕಾರಣ ಲಾಕ್ಡೌನ್ ನಂತರ ಮೊದಲ ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿರುವ ಸಾಧ್ಯತೆ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಹುಬ್ಬಳ್ಳಿ, ವಿಜಯಪುರ, ಹೀಗೆ ಹಲವಾರು ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶ, ಜಾರ್ಖಂಡ್, ರಾಜಸ್ಥಾನ ಮತ್ತಿತರೆ ರಾಜ್ತಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಗಿರಿ ಭಾಗದ ತಾಣಗಳಿಗೆ ಲಗ್ಗೆ ಇಟ್ಟಿದ್ದರು.
ನಗರದ ಲಾಡ್ಜ್ಗಳು, ಗಿರಿ ತಪ್ಪಲಿನ ಹೋಂಸ್ಟೇ, ರೆಸಾರ್ಟ್ಗಳಲ್ಲಿ ತಂಗಿರುವ ಪ್ರವಾಸಿಗರು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ, ಹೊನ್ನಮ್ಮನಹಳ್ಳ, ಕೆಮ್ಮಣ್ಣುಗುಂಡಿ, ಮುತ್ತೋಡಿ, ಕಲ್ಲತ್ತಿಗಿರಿಗಳಿಗೆ ಭೇಟಿ ನೀಡಿದ್ದರು.
ಮುಳ್ಳಯ್ಯನಗಿರಿ ಮಾರ್ಗದಲ್ಲಿ ಆಗಾಗ ವಾಹನದಟ್ಟಣೆಯಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದುದು ಕಂಡುಬಂತು. ಪೊಲೀಸರು ಹಾಗೂ ಚೆಕ್ಪೋಸ್ಟ್ ಸಿಬ್ಬಂದಿಗಳ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈ ಬಾರಿ ಕೊರೋನಾ ನಿಯಮಾವಳಿಗೆಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಕಂಡು ಬರಲಿಲ್ಲ.
ಕೊರೋನಾ ಮೊದಲ ಅಲೆ ಲಾಕ್ ಡೌನ್ ಮುಗಿದ ಸಂದರ್ಭ ಮಾಸ್ಕ್ ಧರಿಸದೆ ಇರುವುದು, ಹೆಚ್ಚು ಸಂಖ್ಯೆಯ ಪ್ರಯಾಣಿಕರನ್ನು ತುಂಬಿಕೊಂಡು ಬಂದಿರುವುದು ಹೀಗೆ ಹಲವು ಕಾರಣಕ್ಕಾಗಿ ಚೆಕ್ಪೋಸ್ಟ್ ಸಿಬ್ಬಂದಿಗಳು ಮುಲಾಜಿಲ್ಲದೆ ಹಿಂದಕ್ಕೆ ಕಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ನಡೆದದ್ದೂ ಇತ್ತು. ಈ ಬಾರಿ ಪ್ರವಾಸಿಗರು ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದು ಕಂಡು ಬಂತು.
ಗಿರಿ ಭಾಗದಲ್ಲಿ ಪೊಲೀಸರು ಮತ್ತು ಚೆಕ್ಪೋಸ್ಟ್ ಸಿಬ್ಬಂದಿಗಳ ಕಾರ್ಯವೈಖರಿ ಸಹ ಮೆಚ್ಚುಗೆಗೆ ಪಾತ್ರವಾಗಿದೆ. ಹೈವೇ ಪ್ಯಾಟ್ರೋಲ್ ಮತ್ತು 112 ಪೊಲೀಸ್ ವಾಹನಗಳು ಬೆಳಗಿನಿಂದ ಸಂಜೆ ವರೆಗೆ ಗಿರಿಭಾಗದಲ್ಲಿ ಗಸ್ತು ನಡೆಸಿ ಕೊರೋನಾ ನಿಯಂತ್ರಣ ನಿಯಮಗಳ ಬಗ್ಗೆ ನಿಗಾ ವಹಿಸಿದ್ದರು. ಟ್ರಾಫಿಕ್ ಜಾಮ್ ಆದಲ್ಲಿ ತಕ್ಷಣ ಸ್ಥಳಕ್ಕೆ ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದುದು ಕಂಡು ಬಂತು.
ಪೊಲೀಸ್ ವಾಹನಗಳು ಹಾಗೂ ಸಿಬ್ಬಂದಿಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದ ಕಾರಣ ಪ್ರವಾಸಿಗರಲ್ಲೂ ಕಾನೂನಿನ ಭಯ ಹಾಗೂ ಜಾಗೃತಿಗೆ ಕಾರಣವಾಯಿತು. ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿದ್ದು ಸಹ ಕಂಡುಬಂತು.