ಹೊಸದಿಗಂತ ಆನ್ ಲೈನ್ ಡೆಸ್ಕ್:
ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ಅಬ್ಬರ ಜೋರಾಗಿದ್ದು, ಈ ವೇಳೆ ವಿವಿಧ ರಾಜ್ಯಗಳ ಆಸ್ಪತ್ರೆಗಳು ಹಾಸಿಗೆಗಳ ಕೊರತೆ ಸಮಸ್ಯೆ ಎದುರಿಸುತ್ತಿವೆ. ಈ ಪರಿಸ್ಥಿತಿಯನ್ನು ನಿಭಾಯಿಸಲು, ಅಗತ್ಯವಿದ್ದಲ್ಲಿ ರೈಲುಗಳ ಕೋವಿಡ್-19 ಕೇರ್ ಕೋಚ್ಗಳನ್ನು ಬಳಸುವಂತೆ ಭಾರತೀಯ ರೈಲ್ವೇ ರಾಜ್ಯ ಸರ್ಕಾರಗಳನ್ನು ಕೇಳಿಕೊಂಡಿದೆ.
‘ನಾವು ಸುಮಾರು 4,000 ಬೋಗಿಗಳನ್ನು ಸಿದ್ಧಪಡಿಸಿದ್ದೇವೆ. ಆ ಬೋಗಿಗಳನ್ನು ಚೆನ್ನಾಗಿ ನಿರ್ವಹಿಸಲಾಗಿದೆ. ಈ ಬೋಗಿಗಳನ್ನು ದೇಶಾದ್ಯಂತ 220 ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇವುಗಳನ್ನು ಬಳಸಬಹುದಾಗಿದೆ ಎಂದು ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.
ಇಲ್ಲಿಯವರೆಗೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಿಂದ ಬೇಡಿಕೆ ಸ್ವೀಕರಿಸಿದ್ದೇವೆ ಮತ್ತು 20 ಬೋಗಿಗಳನ್ನು ಅಲ್ಲಿ ಇರಿಸಲಾಗಿದೆ. ಈ ಬೋಗಿಗಳನ್ನು ರಾಜ್ಯ ಸರ್ಕಾರವು ರೋಗಿಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ, ಕೋವಿಡ್-19 ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳ ಆರೈಕೆಗಾಗಿ ರೈಲುಗಳಲ್ಲಿ ಕೋವಿಡ್-19 ಕೇರ್ ಕೋಚ್ಗಳನ್ನು ಸಿದ್ಧಪಡಿಸಲಾಗಿತ್ತು.