Thursday, July 7, 2022

Latest Posts

ಕೊರೋನಾ ಭೀತಿ: ಸುಪ್ರೀಂಕೋರ್ಟ್ ಆವರಣ ಪ್ರವೇಶಿಸಲು ಟೆಸ್ಟ್ ಕಡ್ಡಾಯ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸುಪ್ರೀಂಕೋರ್ಟ್ ನಲ್ಲೂ ದಿನೇ ದಿನೇ ಅನೇಕ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಹಿನ್ನೆಲೆ ನ್ಯಾಯಾಲಯವು ಹೆಚ್ಚುವರಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರೋಗ ಲಕ್ಷಣಗಳೊಂದಿಗೆ ಕೋರ್ಟ್ ಆವರಣಕ್ಕೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ಸುಪ್ರೀಂಕೋರ್ಟ್ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸಿದ್ದು, ನ್ಯಾಯಾಲಯವು ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ , ಸುಪ್ರೀಂಕೋರ್ಟ್ ಆವರಣಕ್ಕೆ ಪ್ರವೇಶಿಸುವವರೆಲ್ಲರೂ, ಅಂದರೆ ನೋಂದಣಿ ಸಿಬ್ಬಂದಿ, ಸಂಯೋಜನಾ ಸಂಸ್ಥೆಗಳ ಸಿಬ್ಬಂದಿ, ವಕೀಲರು ಮತ್ತು ಅವರ ಸಿಬ್ಬಂದಿ ಇತ್ಯಾದಿ ಎಲ್ಲರೂ ಕೊರೋನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ರ್ಯಾಪಿಡ್/ಆರ್​ಟಿಪಿಸಿಆರ್ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ತಿಳಿಸಿದೆ.
ಎಲ್ಲಾ ಸಿಬ್ಬಂದಿ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮತ್ತು ಆಗಾಗ ಸ್ಯಾನಿಟೈಸ್​ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಜ್ವರ, ಕೆಮ್ಮು, ಮೈ-ಕೈ ನೋವು, ರುಚಿ ಮತ್ತು ವಾಸನೆಯ ನಷ್ಟ, ಅತಿಸಾರ ಇತ್ಯಾದಿಗಳು ಲಕ್ಷಣಗಳಾಗಿದ್ದು, ಈ ಲಕ್ಷಣ ಕಂಡು ಬಂದವರು ತಕ್ಷಣ ಕ್ವಾರಂಟೈನ್​ಗೆ ಒಳಗಾಗಿ ವೈದ್ಯಕೀಯ ಸಲಹೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಒಂದು ಸಮಯದಲ್ಲಿ ಮೂರಕ್ಕಿಂತ ಹೆಚ್ಚು ವ್ಯಕ್ತಿಗಳು ಲಿಫ್ಟ್ ಬಳಸಬಾರದು. ಮೇಲಕ್ಕೆ ಹೋಗಲು ಮಾತ್ರ ಲಿಫ್ಟ್ ಬಳಸಬೇಕು, ಕೆಳಗಿಳಿಯಲು ಮೆಟ್ಟಿಲುಗಳನ್ನು ಬಳಸಬೇಕು ಎಂದು ಎಂದು ಸುತ್ತೋಲೆಯಲ್ಲಿ ಸೇರಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss