Monday, August 15, 2022

Latest Posts

ಮಹಾರಾಷ್ಟ್ರ, ಕರ್ನಾಟಕ ಸಹಿತ 22 ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೋನಾ ಸೋಂಕಿನ ಪ್ರಮಾಣ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರ, ಪಂಜಾಬ್ ಮತ್ತು ಕರ್ನಾಟಕ ಸಹಿತ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದು, ಆದರೆ ಇಷ್ಟು ದಿನ ಏರಿಕೆ ಕಾಣುತ್ತಿದೆ ಕೇರಳದಲ್ಲಿ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕ್ರಮವಾಗಿ 6,467 ಮತ್ತು 3,638 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಇನ್ನು ಕೊರೋನಾ ಹೆಚ್ಚು ತುತ್ತಾಗುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇ ಸ್ಥಾನದಲ್ಲಿದೆ.
ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ 3,696 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 90,055 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿ ಕೇರಳದಲ್ಲಿ 878 ಪ್ರಕರಣಗಳು ಕಡಿಮೆ ವರದಿಯಾಗಿದ್ದು, ಸದ್ಯ, ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ 43,856 ರಷ್ಟಿದೆ.
ಇನ್ನು ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 53 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ಪಂಜಾಬ್‌ನಲ್ಲಿ 397, ಕರ್ನಾಟಕದಲ್ಲಿ 246 ಮತ್ತು ದೆಹಲಿಯಲ್ಲಿ 78 ಸಕ್ರಿಯ ಪ್ರಕರಣಗಳು ಅಧಿಕವಾಗಿವೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳಂತೆ, ಕಳೆದ ಒಂದು ದಿನದಲ್ಲಿ ದೇಶದಲ್ಲಿ 18,327 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,11,92,000 ಕ್ಕೆ ತಲುಪಿದೆ.
ಕಳೆದ ಒಂದು ದಿನದಲ್ಲಿ 14,234 ಸೋಂಕಿತರು ಚೇತರಿಸಿಕೊಳ್ಳುವುದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ 1,08,54,128 ಕ್ಕೆ ತಲುಪಿದೆ.
ಇನ್ನು ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಮಹಾರಾಷ್ಟ್ರ ಮತ್ತು ಪಂಜಾಬ್ ಗೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ಬಹು-ಶಿಸ್ತಿನ ಸಾರ್ವಜನಿಕ ಆರೋಗ್ಯ ತಂಡಗಳನ್ನು ಕಳುಹಿಸಿದೆ. ವೈರಸ್ ಕಣ್ಗಾವಲು, ನಿಯಂತ್ರಣ ಮತ್ತು ಕಂಟೈನ್ ಮೆಂಟ್ ಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆಗಳಿಗೆ ಸಹಾಯ ಮಾಡಲು ಈ ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss