ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕು ಏರಿಕೆ ಕಾಣುತ್ತಿರುವ ಹಿನ್ನೆಲೆ ಇಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ 13 ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು.
ಸುಮಾರು 2 ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದ ಕುರಿತು ಹಲವು ವಿಚಾರಗಳನ್ನ ಸುಧಾಕರ್ ಚರ್ಚಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಬಳಿಕ ಮಾತನಾಡಿದ ಸುಧಾಕರ್, 13 ಜಿಲ್ಲೆಗಳಲ್ಲಿ ಎರಡು ವಾರಗಳಿಂದ ಪಾಸಿಟಿವಿಟಿ ಹೆಚ್ಚಾಗುತ್ತಲಿದೆ. ಬೀದರ್ ಜಿಲ್ಲೆಯಲ್ಲಿ ಹೆಚ್ಚಾಗಿ ದಾಖಲಾಗುತ್ತಿದೆ. ಕೊರೋನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಸ್ಪಷ್ಟ ಮಾರ್ಗದರ್ಶನ ನೀಡಿದ್ದೇವೆ. ಕೇಂದ್ರ ಆರೋಗ್ಯ ಸಚಿವರ ಸಲಹೆಗಳನ್ನು ಜಿಲ್ಲಾಡಳಿತಗಳಿಗೆ ತಿಳಿಸಿದ್ದೇವೆ. ಜನರು ಕೂಡ ಸ್ವಯಂ ನಿರ್ಬಂಧ ಹಾಕಿಕೊಳ್ಳಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದರು.
ಎರಡನೇ ಅಲೆ ನಮ್ಮ ನಿರೀಕ್ಷೆಗೂ ಮೀರಿ ಹರಡುತ್ತಿದೆ. ಹೀಗೇ ಆದರೆ ಆಸ್ಪತ್ರೆಗಳಲ್ಲಿ ಬೆಡ್ ಗಳಿಗೆ ಕೊರತೆ ಆಗುತ್ತದೆ. ಈಗಾಗಲೇ ಎಷ್ಟು ಐಸಿಯು ಬೆಡ್ಗಳು ಬೇಕು ಎಂಬುದರ ಲೆಕ್ಕ ಹಾಕಿದ್ದೇವೆ. ವ್ಯಾಕ್ಸಿನ್ಗಳನ್ನು ಹೆಚ್ಚಿಸುವ ಸಂಬಂಧ ಸೂಚನೆ ಕೊಟ್ಟಿದ್ದೇವೆ. ಕೆಲವು ಸ್ಥಳದಲ್ಲಿ ನೂರಕ್ಕಿಂತ ಹೆಚ್ಚು ಮಂದಿ ಇರುವ ಕಡೆ ನಾವೇ ಹೋಗಿ ಲಸಿಕೆ ಹಾಕುವುದಕ್ಕೆ ಕೇಂದ್ರದಿಂದ ಅನುಮತಿ ಸಿಕ್ಕಿದೆ. ಕೈಗಾರಿಕೆಗಳು, ಹೆಚ್ಚು ಜನರು ಇರುವ ಕಡೆ ನಾವೇ ಹೋಗಿ ಲಸಿಕೆ ಹಾಕ್ತೇವೆ ಎಂದರು.
ಇವತ್ತು ರಾಜ್ಯದಲ್ಲಿ 6970 ಕೇಸ್ ಬಂದಿವೆ. ಬೆಂಗಳೂರಿನ ಬಗ್ಗೆ ನಮಗೆ ಆತಂಕ ಇದ್ದೇ ಇದೆ. ನಾಳೆ ಬೆಂಗಳೂರು ಮಹಾನಗರ, ಗ್ರಾಮಾಂತರ ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಜೊತೆಗೂ ಸಭೆ ನಡೆಸುತ್ತೇವೆ. ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳ ಜೊತೆಗೂ ನಾಳೆ ಸಭೆ ನಡೆಸುತ್ತೇವೆ. ಖಾಸಗಿ ಆಸ್ಪತ್ರೆಗಳ ಸರ್ಕಾರ ಕೂಡ ನಮಗೆ ಅಗತ್ಯವಿದೆ. ನಾಳೆ ಸಂಜೆ 6.30ಕ್ಕೆ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ನಲ್ಲಿ ಸಲಹೆ ನೀಡಲಿದ್ದಾರೆ ಎಂದು ಹೇಳಿದರು.