ಹೊಸ ದಿಗಂತ ವರದಿ, ಬೀದರ:
ವಿಧಾನ ಪರಿಷತ್ ಚುನಾವಣೆಯ ನಿಮಿತ್ತ ಪಶು ಸಂಗೋಪನೆ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಡಿ.10ರಂದು ಔರಾದ ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಬಳಿಕ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ವರದಾನವಾಗಿ ಪರಿಣಮಿಸಲಿವೆ. ನಾನು ಜಿಲ್ಲೆಯಾದ್ಯಂತ ಸಂಚರಿಸಿದ್ದೇನೆ. ಎಲ್ಲಾ ಕಡೆಗಳಲ್ಲಿ ಮತದಾರರಿಂದ ಪ್ರಕಾಶ ಖಂಡ್ರೆ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.
ಪಕ್ಷದ ಜನಪ್ರತಿನಿಧಿಗಳು ಹಾಗೂ ಎಲ್ಲಾ ಮುಖಂಡರು ಚುನಾವಣೆಯಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಅವರು ಭಾರೀ ಮತಗಳ ಅಂತರದಿಂದ ವಿಜಯಶಾಲಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.