ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜುಲೈಯೊಳಗೆ ದೇಶದ 30 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿಕೆಯ ಗುರಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………

ಹೊಸ ದಿಗಂತ ಆನ್ ಲೈನ್:

ಆರು ಕೋಟಿ ಜನಸಂಖ್ಯೆಯ ಫ್ರಾನ್ಸ್‌ನಂತಹ ಮುಂದುವರಿದ ದೇಶ ಜೂ.15ರಿಂದ ದೇಶದ ಎಲ್ಲ ವಯಸ್ಕರಿಗೆ ತನ್ನ ಲಸಿಕೆ ಕಾರ್ಯಕ್ರಮ ಆರಂಭಿಸುವುದಾಗಿ ಘೋಷಿಸಿದ್ದರೆ, ಅಮೆರಿಕ ತನ್ನ ಜನರಿಗೆ ವಿವಿಧ ಆಮಿಷಗಳನ್ನೊಡ್ಡಿ ಲಸಿಕೆ ನೀಡಿಯೂ ಶೇ.40ರಷ್ಟು ಮಂದಿಗೂ ಲಸಿಕೆ ಕಾರ್ಯಕ್ರಮ ಗುರಿ ಪೂರೈಸಲಾಗದೆ ಹೆಣಗುತ್ತಿದ್ದರೆ, ಭಾರತವು ಎಲ್ಲ ಪ್ರತಿಕೂಲ ಪ್ರಚಾರ, ಸವಾಲುಗಳ ನಡುವೆಯೂ ಜುಲೈಯೊಳಗೆ ತನ್ನ ವಯಸ್ಕ ಜನಸಂಖ್ಯೆಯ ಅರ್ಧದಷ್ಟು ಮಂದಿಗೆ ಕನಿಷ್ಠ ಮೊದಲ ಡೋಸ್ ಲಸಿಕೆ ನೀಡಬೇಕೆಂಬ ಗುರಿಯೊಂದಿಗೆ ದಾಪುಗಾಲಿಡುತ್ತಿದೆ.
ನಮ್ಮ ದೇಶ ಈಗಾಗಲೇ ಕೊರೋನಾ ವಾರಿಯರ್ಸ್ , ಮುಂಚೂಣಿ ಕಾರ್ಯಕರ್ತರು, 65ಕ್ಕಿಂತ ಮೇಲ್ಪಟ್ಟವರು ಹಾಗೂ ಇದೀಗ ಮೂರನೇ ಹಂತದಲ್ಲಿ18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಲಸಿಕಾ ಕಾರ್ಯಕ್ರಮ ಆರಂಭಿಸಿದೆ. ಅಲ್ಲದೆ ಈಗಾಗಲೇ 15.89ಕೋಟಿ ಜನರಿಗೆ ಲಸಿಕೆ ಹಾಕಿಸಿದೆ.
ಕೇಂದ್ರ ಸರಕಾರ ಜುಲೈಯೊಳಗೆ ಸುಮಾರು 30 ಕೋಟಿ ಡೋಸ್‌ಗಳಷ್ಟು ಲಸಿಕೆ ಪಡೆಯುವ ನಿರೀಕ್ಷೆಯಲ್ಲಿದೆ.ತನ್ನ 90 ಕೋಟಿ ವಯಸ್ಕ ಜನಸಂಖ್ಯೆಯಲ್ಲಿ ಈಗಾಗಲೇ 15.89ಕೋಟಿ ಜನರಿಗೆ ಲಸಿಕೆ ನೀಡಿದೆ. ಇದರಂತೆ ಮುಂಬರುವ ಜುಲೈಯೊಳಗೆ ಅರ್ಧದಷ್ಟು ಮಂದಿಗಾದರೂ ಕನಿಷ್ಠ ಮೊದಲ ಡೋಸ್ ಲಸಿಕೆಯನ್ನಾದರೂ ನೀಡಬೇಕೆಂಬ ಗುರಿ ಹೊಂದಿ ಕೆಲಸ ಮಾಡುತ್ತಿದೆ.
ಭಾರತೀಯ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ವಿರುದ್ಧ ದೇಶದೊಳಗೆ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ, ಒತ್ತಡ ತಂತ್ರಗಳು ನಡೆಯುತ್ತಿರುವ ನಡುವೆಯೇ ಕೇಂದ್ರ ಸರಕಾರ ತನ್ನ ಗುರಿ ಸಾಧನೆಯತ್ತ ಗಮನ ಹರಿಸಿದೆ. ಈಗಾಗಲೇ ರಶ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯ ಪ್ರಥಮ ಬ್ಯಾಚ್ ದೇಶಕ್ಕೆ ಆಗಮಿಸಿದ್ದರೆ, ಶೀಘ್ರವೇ ಇನ್ನೆರಡು ಲಸಿಕೆಗಳಿಗೆ ಕೇಂದ್ರ ಸರಕಾರದ ಅನುಮತಿ ಲಭಿಸಲಿದೆ.
ಜನವರಿಯಲ್ಲಿ ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನ ಆರಂಭಿಸಿದ್ದು, ಎರಡು ಹಂತಗಳು ಈಗಾಗಲೇ ಪೂರ್ಣಗೊಂಡಿವೆ. ಮೂರನೇ ಹಂತದಲ್ಲಿ ಕೇಂದ್ರ ಸರಕಾರ, ರಾಜ್ಯ ಸರಕಾರಗಳಲ್ಲದೆ ಖಾಸಗಿಯವರಿಗೂ ಹೆಚ್ಚು ಉದಾರ ರೀತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಈ ನಡುವೆ ಸೇರಂ ಇನ್‌ಸ್ಟಿಟ್ಯೂಟ್ , ಜನವರಿಯಿಂದ ತಾನು ಭಾರತ ಸರಕಾರದಿಂದ 26 ಕೋಟಿ ಡೋಸ್‌ಗಳ ಆದೇಶ ಪಡೆದಿದ್ದು, ಈ ಪೈಕಿ 15ಕೋಟಿ ಡೋಸ್‌ಗಳನ್ನು ಈಗಾಗಲೇ ಪೂರೈಸಿರುವುದಾಗಿ ಹೇಳಿದೆ.“ಮುಂದಿನ ಕೆಲವು ತಿಂಗಳು”ಗಳಲ್ಲಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಯವರಿಗೆ ತಾನು 11ಕೋಟಿ ಡೋಸ್‌ಗಳನ್ನು ನೀಡಲಿದ್ದೇನೆ ಎಂದೂ ತಿಳಿಸಿದೆ.ಪ್ರಸಕ್ತ ಸಂಸ್ಥೆಯು ತಿಂಗಳಿಗೆ 7ಕೋಟಿ ಡೋಸ್‌ಗಳನ್ನು ಮಾತ್ರವೇ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಜುಲೈಯೊಳಗೆ ಈ ಸಾಮರ್ಥ್ಯವನ್ನು 10ಕೋಟಿ ಡೋಸ್‌ಗಳಿಗೆ ಹೆಚ್ಚಿಸಿಕೊಳ್ಳಲಿದ್ದೇನೆ.ಅಲ್ಲದೆ ತಾನೀಗ ವಿದೇಶದಲ್ಲೂ ಉತ್ಪಾದನಾ ಕೇಂದ್ರ ಹೊಂದಲಿರುವುದಾಗಿ ಅದು ಹೇಳಿದೆ.
ಕೇಂದ್ರ ಸರಕಾರವು ಮೇ, ಜೂನ್, ಜುಲೈಯಲ್ಲಿ ಸಂಸ್ಥೆಯಿಂದ 11ಕೋಟಿ ಡೋಸ್‌ಗಳನ್ನು ಪಡೆಯುವ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದೆ. ಸೇರಂ ಅಲ್ಲದೆ ಕೇಂದ್ರ ಸರಕಾರವು ಭಾರತ್ ಬಯೋಟೆಕ್‌ನಿಂದ 7.5ಕೋಟಿ ಕೊವ್ಯಾಕ್ಸಿನ್ ಡೋಸ್‌ಗಳಿಗಾಗಿ ಆದೇಶ ನೀಡಿದೆ. ಅದು ಈಗಾಗಲೇ 1.5ಕೋಟಿ ಡೋಸ್‌ಗಳನ್ನು ಕೇಂದ್ರಕ್ಕೆ ನೀಡಿದ್ದು, ಮೇ ಮತ್ತು ಜುಲೈ ನಡುವೆ 6ಕೋಟಿಗೂ ಅಧಿ ಕ ಡೋಸ್‌ಗಳನ್ನು ಒದಗಿಸಲಿದ್ದೇನೆ ಎಂದಿದೆ.ಈಗಾಗಲೇ ದೇಶದಲ್ಲಿ 14.2ಕೋಟಿ ಡೋಸ್‌ಗಳನ್ನು ಜನತೆಗೆ ನೀಡಲಾಗಿದ್ದು, ಕೇಂದ್ರ ಪೂರೈಸಿದ 78ಲಕ್ಷ ಡೋಸ್‌ಗಳಷ್ಟು ಈಗ ವಿವಿಧ ರಾಜ್ಯಗಳ ಸಂಗ್ರಹದಲ್ಲಿದೆ.ಸೇರಂನ ಕೋವಿಶೀಲ್ಡ್ ಲಸಿಕೆಗೆ 300ರೂ. ಮತ್ತು ಭಾರತ್ ಬಯೋಟೆಕ್‌ನ ಲಸಿಕೆಗೆ 400ರೂ.ದರವಿದ್ದು, ಇದು ಜಗತ್ತಿನ ಲಸಿಕೆಗಳಲ್ಲೇ ಅತಿ ಕಡಿಮೆ ದರ ಹೊಂದಿರುವ ಲಸಿಕೆಗಳಾಗಿವೆ.
ಈ ನಡುವೆ,ರಶ್ಯಾದಿಂದ ಮೇ 1ರಂದು ಹೈದರಾಬಾದ್‌ನ ರೆಡ್ಡೀಸ್ ರ‍್ಯಾಬೋರೇಟರಿಗೆ 1.4ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಬಂದಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss