ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಮನನೊಂದು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.
ಪತಿ, ಪತ್ನಿ ಗುರುವಾರ ಮುಂಜಾನೆ ವಿಷ ಸೇವಿಸಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಸಾವನ್ನಪ್ಪಿದ್ದಾರೆ ಎಂದು ಬಸ್ತಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಗೋಪಾಲಕೃಷ್ಣ ತಿಳಿಸಿದ್ದಾರೆ.
ಸೆಪ್ಟೆಂಬರ್ 21ರ ಮಧ್ಯರಾತ್ರಿ ಇಬ್ಬರು ದುಷ್ಕರ್ಮಿಗಳು ಮನೆಗೆ ನುಗ್ಗಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂದು ದಂಪತಿಯ ಸಂಬಂಧಿಕರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ದಂಪತಿ ಆರೋಪಿಗಳ ಹೆಸರನ್ನು ನಮೂದಿಸಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಶುಕ್ರವಾರದಂದು ಆದರ್ಶ್ (25) ಮತ್ತು ತ್ರಿಲೋಕಿ (45) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ ಮಕ್ಕಳು ಶಾಲೆಗೆ ಹೊರಡುವ ವೇಳೆ ವಿಷ ಸೇವಿಸಿ ಸಾಯುವುದಾಗಿ ಪೋಷಕರು ಹೇಳಿದ್ದರು ಎಂದು ಮೃತ ದಂಪತಿಯ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ದಂಪತಿಗೆ 8 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದು, 1 ವರ್ಷದ ಹೆಣ್ಣು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.