Wednesday, August 10, 2022

Latest Posts

ಕೊವ್ಯಾಕ್ಸಿನ್ ಫಾರ್ಮುಲಾ ಉಳಿದವರಿಗೂ ಮುಕ್ತ: ಆದ್ರೆ ಕೇಜ್ರಿವಾಲ್ ಅಂದುಕೊಂಡಂತೆ ಎಲ್ಲರೂ ಲಸಿಕೆ ಮಾಡಲಾಗದು ಏಕೆ ಗೊತ್ತೇ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೆಲದಿನಗಳ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒಂದು ಬೇಡಿಕೆ ಇರಿಸಿದರು. ಅದೆಂದರೆ- “ಲಸಿಕೆಗಳ ಉತ್ಪಾದನೆಯ ವೇಗ ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರವು ಈಗಿರುವ ಎರಡು ದೇಸಿ ಕಂಪನಿಗಳಿಂದ ಲಸಿಕೆ ಸೂತ್ರವನ್ನು ಪಡೆದು ಅದನ್ನು ಜಾಹೀರುಗೊಳಿಸಬೇಕು. ಆಗ ಬೇರೆಡೆಯೂ ಇವನ್ನು ಉತ್ಪಾದಿಸಿ ಎಲ್ಲರಿಗೂ ಲಸಿಕೆ ಕೊಡಬಹುದು.”
ಎರಡು ದಿನಗಳ ಹಿಂದಷ್ಟೇ ಸರ್ಕಾರಿ ಸ್ವಾಮ್ಯದ ಭಾರತ ಬಯೋಟೆಕ್ ಕಂಪನಿ ತನ್ನ ಲಸಿಕೆ ಸೂತ್ರವನ್ನು ಉತ್ಪಾದನಾ ಸಾಮರ್ಥ್ಯ ಇರುವವರು ಮುಂದೆ ಬಂದರೆ ನೀಡುವುದಾಗಿ ಹೇಳಿದೆ. ಕೇಜ್ರಿವಾಲರ ಆಶಯವೇ ನಿಜವಾಗಿದ್ದರೆ ಭಾರತದ ಫಾರ್ಮಾ ಘಟಕಗಳೆಲ್ಲ ತಾ ಮುಂದು ತಾ ಮುಂದೆಂದು ಬಂದು ಲಸಿಕೆಯ ಸೂತ್ರ ಪಡೆದು ಉತ್ಪಾದನೆಗೆ ಮುಂದಾಗಬೇಕಿತ್ತು. ಆದರೆ ಹಾಗೇನೂ ಆಗಿಲ್ಲ. ಕಾರಣವೇನು?
ರೆಸಿಪಿಯೋ, ಸೂತ್ರವೋ ಗೊತ್ತಾದ ತಕ್ಷಣ ನಕಲು ಮಾಡುವಷ್ಟು ಸುಲಭ ಪ್ರಕ್ರಿಯೆ ಇದಲ್ಲ. ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಫಾರ್ಮುಲಾ ಗೊತ್ತಾದ ಮಾತ್ರಕ್ಕೆ ಉಳಿದವರು ಉತ್ಪಾದನೆಗಳಿಯುವಷ್ಚು ವಿಷಯ ಸರಳವಲ್ಲ ಎಂಬುದು ಐಐಟಿಯಲ್ಲಿ ಓದಿ ಬಂದ ಕೇಜ್ರಿವಾಲರಿಗೆ ತಿಳಿಯದಿದ್ದದ್ದು ಅಚ್ಚರಿಯ ವಿಷಯ.
ಕೊರೊನಾದ ಸಕ್ರಿಯ ವೈರಸ್ ಅನ್ನು ನಿಷ್ಕ್ರಿಯವಾಗಿಸಿ ಕೊವ್ಯಾಕ್ಸಿನ್ ಲಸಿಕೆ ತಯಾರಾಗಿದೆ. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಪರಿಣತರಿಗೆ ಈ ‘ರೆಸೆಪಿ’ ಅಂಥ ರಹಸ್ಯವೇನಲ್ಲ. ಆದರೆ ಇದರ ಅಭಿವೃದ್ಧಿಗೆ ಬಿಎಸ್ಎಲ್-3 ಮಟ್ಟದ ಲ್ಯಾಬುಗಳು ಬೇಕು.
ಬಯೊ ಸೇಫ್ಟಿ ಲೆವೆಲ್ 3ರ ಲ್ಯಾಬ್ ಗಳನ್ನು ಹಾಗೂ ಅದರಲ್ಲಿ ಕೆಲಸ ಮಾಡಬಲ್ಲ ತಂತ್ರಜ್ಞರನ್ನು ರಾತ್ರೋರಾತ್ರಿ ಸೃಷ್ಟಿಸುವುದಕ್ಕೆ ಆಗುವುದಿಲ್ಲ. ಬಿಎಸ್ಎಲ್-3 ಲ್ಯಾಬ್ ಎನ್ನುವುದು ಸಕ್ರಿಯ ವೈರಸ್ಸನ್ನು ನಿಷ್ಕ್ರಿಯಗೊಳಿಸುವ ಹಂತದಲ್ಲಿ ಇರುವ ಅಪಾಯಗಳಿಗೆ ಸುರಕ್ಷೆ ಒದಗಿಸುವ ನಿಟ್ಟಿನಲ್ಲಿ ರೂಪಿತವಾಗಿರುತ್ತದೆ. ಇಂಥ ತಂತ್ರಜ್ಞಾನಯುಕ್ತ ಲ್ಯಾಬ್ ನಿರ್ಮಾಣಕ್ಕೆ ವರ್ಷಗಳೇ ಹಿಡಿಯುತ್ತವೆ.
ಮುಂಬೈನ ಹಾಫ್ಕಿನ್ ಇನ್ಸ್ಟಿಟ್ಯೂಟ್, ಇಂಡಿಯನ್ ಇಮ್ಯುನಾಲಾಜಿಕಲ್ ಲಿಮಿಟೆಡ್ ಇತ್ಯಾದಿ ಸಂಸ್ಥೆಗಳಿಗೆ ಅದಾಗಲೇ ಭಾರತ ಬಯೋಟೆಕ್ ಕೊವ್ಯಾಕ್ಸಿನ್ ತಯಾರಿಕೆಗೆ ಒಪ್ಪಿಗೆ ಕೊಡಲಾಗಿದೆ. ಇವೆಲ್ಲ ಸುಸಜ್ಜಿತ ಲ್ಯಾಬ್ ಹೊಂದಿರುವ ಸಂಸ್ಥೆಗಳೇ ಆದರೂ ಅಲ್ಲಿ ಸುರಕ್ಷತೆಯ ಹಂತದಲ್ಲಿ ಪೂರಕ ಬದಲಾವಣೆಗಳನ್ನು ಮಾಡಿಕೊಂಡು ಉತ್ಪಾದನೆ ಶುರು ಮಾಡುವುದಕ್ಕೆ ತಿಂಗಳುಗಳೇ ಹಿಡಿಯುತ್ತವೆ.
ಇಂದು ಜಾಗತಿಕ ಮಾರುಕಟ್ಟೆಯಲ್ಲಿರುವ ಫಿಜರ್, ಅಸ್ಟ್ರಾಜೆನಕಾ ಇವೆಲ್ಲವೂ ವೈರಾಣುವಿನಲ್ಲಿರುವ ಸ್ಪೈಕ್ ಪ್ರೊಟಿನ್ ಅನ್ನು ಉಪಯೋಗಿಸಿಕೊಂಡು ಆ ಮೂಲಕ ದೇಹದಲ್ಲಿ ಪ್ರತಿರೋಧಕ ಸಾಮರ್ಥ್ಯ ಹುಟ್ಟುವಂತೆ ಮಾಡುವ ತಂತ್ರವನ್ನು ಹೊಂದಿವೆ. ಭಾರತದಲ್ಲೇ ಅಭಿವೃದ್ಧಿ ಹೊಂದಿ ನಿರ್ಮಿತವಾಗಿರುವ ಕೊವ್ಯಾಕ್ಸಿನ್ ಮಾತ್ರವೇ ಸಕ್ರಿಯ ವೈರಾಣುವನ್ನು ನಿಷ್ಕ್ರಿಯವಾಗಿಸಿ ಲಸಿಕೆ ಮೂಲಕ ದೇಹದಲ್ಲಿ ಪ್ರತಿರೋಧ ಹೆಚ್ಚಿಸುವ ತಂತ್ರವನ್ನು ಅನುಸರಿಸುತ್ತದೆ. ಈ ಸೂಕ್ಷ್ಮ ಮಾರ್ಗವನ್ನು ಅನುಸರಿಸುವ ಧೈರ್ಯ ಎಲ್ಲ ಕಂಪನಿಗಳಿಗೂ ಇರುವುದಿಲ್ಲ ಎನ್ನುತ್ತಾರೆ ಪರಿಣತರು.
ಲಸಿಕೆ ಎಂಬುದು ‘ರೆಸಿಪಿ’ ತಮ್ಮದಾಗಿಸಿಕೊಂಡು ನಮ್ಮದೇ ಅಡುಗೆಮನೆಯಲ್ಲಿ ತಯಾರಿಸಿಬಿಡಬಹುದಾದ ಖಾದ್ಯ ಅಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss