ಹೊಸ ದಿಗಂತ ವರದಿ, ಚಿತ್ರದುರ್ಗ:
ಮಧ್ಯ ಕರ್ನಾಟಕದ ಪ್ರಸಿದ್ಧ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಕೋವಿಡ್-19ರ ಎರಡನೇ ಅಲೆಯ ಹಿನ್ನೆಲೆಯಲ್ಲಿ ರದ್ದು ಪಡಿಸಲಾಗಿದ್ದು, ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಮಾತ್ರ ಅವಕಾಶ ಕಲ್ಪಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಾಯಕನಹಟ್ಟಿಯ ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ದೊಡ್ಡ ರಥೋತ್ಸವದ ಜಾತ್ರಾ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಪಟ್ಟಣದ ಶ್ರೀಗುರು ತಿಪ್ಪೇರುದ್ರಸ್ವಾಮಿ ಕ್ಷೇತ್ರದಲ್ಲಿ ಮಾರ್ಚ್ ೨೨ ರಿಂದ ಏಪ್ರಿಲ್ ೦೫ ರವರೆಗೆ ನಡೆಯುವ ಜಾತ್ರೆಯನ್ನು ಜಿಲ್ಲಾಡಳಿತ ರದ್ಧು ಪಡಿಸಿದ್ದು, ಜಾತ್ರೆಯ ವಿಧಿ, ವಿಧಾನ ಮತ್ತು ಸಾಂಪ್ರದಾಯಿಕವಾಗಿ ಮಾತ್ರ ಜಾತ್ರೆ ನಡೆಸಲು ಅವಕಾಶ ನೀಡಿದೆ ಎಂದರು.
ಜಾತ್ರೆಯ ಅಂಗವಾಗಿ ನಡೆಯುವ ದೊಡ್ಡ ರಥೋತ್ಸವ, ಅಂಗಡಿ, ಮಳಿಗೆ, ವಸ್ತು ಪ್ರದರ್ಶನ, ಜಾನುವಾರು ಪ್ರದಕ್ಷಿಣೆ ಸೇರಿದಂತೆ ಯಾವುದೂ ಇರುವುದಿಲ್ಲ ಹಾಗೂ ಹೊರಗಡೆಯಿಂದ ಬರುವ ಜನರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರತಿ ವರ್ಷ ಇಲ್ಲಿಗೆ ಬೇರೆ ರಾಜ್ಯ, ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸುತ್ತಿದ್ದರು. ಆದರೆ ಈ ಭಾರಿ ಕೋವಿಡ್ ಹಿನ್ನೆಲೆಯಲ್ಲಿ ಬೇರೆ ಕಡೆಯಿಂದ ಜಾತ್ರಾ ಸಂದರ್ಭದಲ್ಲಿ ಬರುವ ಜನರಿಗೆ ಅವಕಾಶ ನೀಡುವುದಿಲ್ಲ. ಇಲ್ಲಿ ಅಂಗಡಿಗಳನ್ನು ತೆರೆಯುವಂತಿಲ್ಲ, ಟೆಂಟ್ ಹಾಕುವಂತಿಲ್ಲ, ಎಲ್ಲಾ ಕಡೆ ಚೆಕ್ಪೋಸ್ಟ್ಗಳನ್ನು ಅಳವಡಿಸಿ ಅಲ್ಲಿಂದಲೇ ವಾಪಸ್ ಕಳುಹಿಸಲಾಗುತ್ತದೆ ಎಂದು ಹೇಳಿದರು.
ಯಾವುದೇ ಪ್ರಾಣಿ ಬಲಿ, ಟೆಂಟ್ ಹಾಕುವುದು ಸೇರಿದಂತೆ ಇಲ್ಲಿ ಬಂದು ಅಡುಗೆ ಮಾಡಿಕೊಂಡು ಪ್ರಸಾದ ತೆಗೆದುಕೊಳ್ಳುವುದನ್ನು ಸಹ ನಿರ್ಬಂಧಿಸಲಾಗಿದೆ. ಭಕ್ತಾಧಿಗಳು ಕೋವಿಡ್ ಹಿನ್ನೆಲೆಯಲ್ಲಿ ಯಾರೂ ಸಹ ಜಾತ್ರೆಗೆಂದು ಬಾರದೆ ಮನೆಯಲ್ಲಿಯೇ ಭಕ್ತಿಯಿಂದ ಪೂಜೆ ಮಾಡಲು ಮನವಿ ಮಾಡಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಮಾತನಾಡಿ, ಜಾತ್ರೆಯ ಸಂದರ್ಭದಲ್ಲಿ ಅಂಗಡಿ ಮಳಿಗೆ ತೆರೆಯಲು ಅವಕಾಶವಿಲ್ಲ. ಹೊರಗಡೆಯಿಂದ ಬರುವ ಭಕ್ತಾಧಿಗಳಿಗೆ ನಿರ್ಬಂಧವಿಧಿಸಲಾಗಿದ್ದು, ಎಲ್ಲ ಕಡೆ ಚೆಕ್ಪೋಸ್ಟ್ಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ನಾಯಕನಹಟ್ಟಿ ಪ.ಪಂ. ಅಧ್ಯಕ್ಷ ಮಹಂತೇಶ್, ಚಳ್ಳಕರೆ ತಾ.ಪಂ. ಅಧ್ಯಕ್ಷ ತಿಪ್ಪೇಸ್ವಾಮಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ತಹಶೀಲ್ದಾರ್ ಮಲ್ಲಿಕಾರ್ಜುನ್, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಶಶಿಧರ್ ಸೇರಿದಂತೆ ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.