Sunday, June 26, 2022

Latest Posts

ಕೋವಿಡ್ 2ನೇ ಅಲೆಯಿಂದ ಅನ್ನದಾತನ ಆರ್ಥಿಕತೆಗೂ ಬರೆ: ಬೆಲೆ ಸಿಗದೇ ಬೆಳೆ ನಾಶಪಡಿಸುತ್ತಿರುವ ರೈತ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….


ಹೊಸ ದಿಗಂತ ವರದಿ, ಕೋಲಾರ:

ಕೊರೋನಾ 2ನೇ ಅಲೆಯಿಂದ ಜೀವಕ್ಕೆ ಮಾತ್ರವಲ್ಲ ರೈತರ ಆರ್ಥಿಕ ತೆಗೂ ಪೆಟ್ಟು ಬಿದ್ದಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಮಾರುಕಟ್ಟೆ, ಬೆಲೆ ಸಿಗದ ಕಾರಣ ಮಕ್ಕಳಂತೆ ಪೋಷಿಸಿದ ಬೆಳೆಗಳನ್ನು ಕೈಯಾರೆ ನಾಶಪಡಿಸುವ ದುಸ್ಥಿತಿ ಅನ್ನದಾತನದ್ದಾಗಿದೆ.
ಜಿಲ್ಲೆಯ ಹಲವಾರು ಕಡೆಗಳಲ್ಲಿ ಬೆಳೆದಿರುವ ಬೆಳೆಗಳಿಗೆ ಸಮರ್ಪಕ ಬೆಲೆ ದೊರೆಯದೆ ರೈತರು ಬೆಳೆಯನ್ನೇ ನಾಶಪಡಿಸುತ್ತಿದ್ದಾರೆ. ಕೊರೋನಾ ಸೋಂಕಿತ ಪ್ರಕರಣಗಳು ದಿನೇದಿನೇ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದೆ.
ಲಾಕ್‌ಡೌನ್ ನಡುವೆಯೂ ಸರ್ಕಾರವೇನೋ ರೈತರಿಗೆ ತೊಂದರೆಯಾಗದಿರಲಿ ಎಂದು ಎಪಿಎಂಸಿ ಮಾರುಕಟ್ಟೆಗಳಲ್ಲಿ ವಹಿವಾಟಿಗೆ ಅವಕಾಶ ಕಲ್ಪಿಸಿದೆ ಆದರೆ ರೈತರು ಮಾರುಕಟ್ಟೆಗೆ ತರಕಾರಿ ಕೊಂಡೊಯ್ದರೆ ಅಲ್ಲಿ ಕೊಳ್ಳುವವರೇ ಇಲ್ಲ. ಹೊರ ರಾಜ್ಯ, ಜಿಲ್ಲೆಗಳ ವ್ಯಾಪಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ, ಹೊರ ರಾಜ್ಯಗಳಿಗೆ ತರಕಾರಿ ಸರಬರಾಜು ಸಮರ್ಪಕವಾಗಿರದ ಕಾರಣ ಬೆಲೆಯಿಲ್ಲದೇ ರೈತ ಕಂಗಾಲಾಗುವಂತಾಗಿದೆ.
ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ ಟೊಮೆಟೊ, ಕ್ಯಾಪ್ಸಿಕಂ, ಕ್ಯಾರೆಟ್, ಬೀಟ್‌ರೋಟ್, ಕೋಸು, ಬೀನ್ಸ್ ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲಾಗಿದೆ. ಲಾಕ್‌ಡೌನ್ ಮುಂಚ್ಚೆ ಇದ್ದ ಬೆಲೆ ಈಗ ಇಲ್ಲದಾಗಿದ್ದು, ರೈತರು ಬೆಳೆಯ ಮೇಲೆ ಹಾಕಿರುವ ಬಂಡವಾಳ ಸಂಪಾದನೆ ಮಾಡುವುದು ಕಷ್ಟವಾಗಿದೆ. ಇದರಿಂದ ರೈತರು ನಷ್ಟದ ಪರಿಸ್ಥಿತಿಗೆ ಸಿಲುಕಿದ್ದಾರೆ.

ಪಾಲಿಹೌಸ್‌ನಲ್ಲಿನ ಕ್ಯಾಪ್ಸಿಕಾಂ ನಾಶ

ತಾಲ್ಲೂಕಿನ ಕೋಟಿಗಾನಹಳ್ಳಿ ರೈತ ಚಲಪತಿ ಒಂದು ಎಕರೆ ಪಾಲಿ ಹೌಸ್‌ನಲ್ಲಿ ಬೆಳೆದಿರುವ ಕ್ಯಾಪ್ಸಿಕಂ ಬೆಳೆ ತೆಗೆಯಲು ಸುಮಾರು ೨ ಲಕ್ಷ ವೆಚ್ಚ ಮಾಡಿದ್ದಾರೆ. ಕಳೆದ ಎರಡು ತಿಂಗಳಿಂದ ಫಸಲು ಕೊಯ್ಲು ಮಾಡುತ್ತಿದ್ದರು ಮಾರುಕಟ್ಟೆಯಲ್ಲಿ ಬೆಲೆ ದೊರೆತಿಲ್ಲ. ಇದರಿಂದ ಹಾಕಿರುವ ಬಂಡವಾಳದಲ್ಲಿ ಅರ್ದಷ್ಟು ತೆಗೆಯಲು ಸಾಧ್ಯವಾಗದೆ ಸೊಂಪಾಗಿ ಬೆಳೆದಿರುವ ಗಿಡಗಳನ್ನು ಕೈಯಾರೆ ನಾಶಪಡಿಸುತ್ತಿರುವುದು ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ.
ಕಳೆದ ವರ್ಷ ಕೊರೋನಾ ಸಂಕಷ್ಟದಲ್ಲಿ ಬೆಳೆಗಳನ್ನು ನಾಶ ಮಾಡಿದಾಗ ತೋಟಗಾರಿಕೆ ಇಲಾಖೆಯಿಂದ ಅರ್ಜಿಗಳನ್ನು ಕರೆದು ಪರಿಹಾರ ಕಲ್ಪಿಸಲಾಗಿತ್ತು, ಸರ್ಕಾರ ಹೀಗಲೂ ಸಹ ಅರ್ಜಿಗಳನ್ನು ಕರೆದು ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಕಲ್ಪಿಸಬೇಕು ಎಂಬುದು ರೈತರ ಒತ್ತಾಯವಾಗಿದೆ.
ಕೋಟಿಗಾನಹಳ್ಳಿ ರೈತ ಚಲಪತಿ ಮಾತನಾಡಿ, ಒಂದು ಎಕರೆ ಪ್ರದೇಶದಲ್ಲಿ ಕ್ಯಾಪ್ಸಿಕಂ ಬೆಳೆಯಲಾಗಿದ್ದು, ಎರಡು ಮೂರು ಕೊಯ್ಲಿನಿಂದ ಕೋರೊನಾ ಸೋಂಕಿನ ಹಾವಳಿಯಿಂದ ಮಾರುಕಟ್ಟೆಯಲ್ಲಿ ಬೆಲೆ ದೊರೆಯುತ್ತಿಲ್ಲ. ಬೆಳೆಗೆ ಪ್ರತಿ ವಾರ ಮೂರು ಬಾರಿ ಔಷದಿ ಸಿಂಪಂಡನೆ ಮಾಡಬೇಕು. ಅದಕ್ಕು ಹಣ ಬರುವುದಿಲ್ಲ. ಹಾಗೆ ಬಿಟ್ಟರೆ ಪಕ್ಕದಲ್ಲಿನ ಟೊಮೆಟೊ ಬೆಳೆಗೆ ರೋಗ ತಗಲುವ ಅವಕಾಶ ಇದೆ. ಇದರಿಂದ ಬೆಳೆಯನ್ನು ನಾಶ ಪಡಿಸುತ್ತಿರುವುದಾಗಿ ತಮ್ಮ ನೋವು ತೋಡಿಕೊಂಡರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಒಂದು ವರ್ಷದಿಂದ ರೈತರು ಕೊರೋನಾ ಸಂಕಷ್ಟಕ್ಕೆ ಸಿಲುಕಿ ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿದ್ದಾರೆ. ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಒಂದು ವರ್ಷದಿಂದ ಕೊರೋನಾ ರೈತರನ್ನು ಕಾಡುತ್ತಿದೆ. ಎಪಿಎಂಸಿಯ ಆಡಳಿತ ಮಂಡಳಿಯವರು ಇತ್ತ ಗಮನ ಹರಿಸದೆ ಇರುವುದು ನಾಚೀಕೆಗೇಡಿನ ಸಂಗತಿ. ರೈತರ ಹಿತಕ್ಕಿಂತ ಅವರ ಸ್ವಹಿತಾಸಕ್ತಿಯೇ ಮುಖ್ಯವಾಗಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಎರಡನೇ ಅಲೆ ಕೊರೋನಾ ಸೋಂಕು ಅರ್ಭಟ ಜನರನ್ನು ಬೆಚ್ಚಿ ಬೀಳಿಸಿದೆ. ಇದರಿಂದ ರೈತರು ಸುಧಾರಣೆಯಾಗಲು ಸಾಧ್ಯವಾಗಿಲ್ಲ. ಸರ್ಕಾರ ಎಚ್ಚೆತ್ತುಕೊಂಡು ರೈತರ ಬೆಳೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಖರೀದಿದಾರರನ್ನು ರೈತರ ತೋಟಗಳಿಗೆ ಕಳುಹಿಸಿ ಖರೀದಿ ಮಾಡುವ ವ್ಯವಸ್ಥೆಯನ್ನು ಎಪಿಎಂಸಿ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss