ಹೊಸದಿಗಂತ ವರದಿ, ಕೊಡಗು:
ಜಿಲ್ಲೆಯಲ್ಲಿ ಸದ್ಯಕ್ಕೆ ಕೋವಿಡ್ ಪಾಸಿಟಿವಿಟಿ ದರ ಶೇಕಡಾ 5 ರ ಒಳಗೆ ಇದ್ದು, ಸಾರ್ವಜನಿಕರು ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.
ಕೆಲವು ದೃಶ್ಯ ಮಾಧ್ಯಮಗಳಲ್ಲಿ ಜಿಲ್ಲೆಯಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.8ಕ್ಕಿಂತಲೂ ಅಧಿಕವಿರುವುದಾಗಿ ವರದಿಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಮಂಗಳವಾರ ಪಾಸಿಟಿವಿಟಿ ಪ್ರಮಾಣ ಕೇವಲ 0.84ರಷ್ಟಿತ್ತು. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯ ಪ್ರಮಾಣ ದಿನಕ್ಕೆ 3,200 ಕ್ಕೆ ಏರಿಸಲಾಗಿದ್ದು, ಹೀಗಾಗಿ ಪಾಸಿಟಿವಿಟಿ ಪ್ರಮಾಣದಲ್ಲಿ ಏರಿಳಿತವಾಗುತ್ತಿದೆ. ಕಳೆದ ವಾರ ಒಂದು ದಿನ ಮಾತ್ರ ಪಾಸಿಟಿವಿಟಿ ಪ್ರಮಾಣ ಶೇ.6ರ ಗಡಿ ದಾಟಿರುವುದು ಬಿಟ್ಟರೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಪಷ್ಟಪಡಿಸಿದರು.
ಶಾಲಾ-ಕಾಲೇಜ್ ಬಂದ್ ಇಲ್ಲ: ಸದ್ಯಕ್ಕೆ ಜಿಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಶಾಲಾ ಕಾಲೇಜು ಬಂದ್ ಮಾಡುವ ಅಗತ್ಯವಿಲ್ಲ. ಕೆಲವು ಶಾಲೆಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದರೂ, ಇತರ ವಿದ್ಯಾರ್ಥಿಗಳಿಗೆ ಹರಡದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಯ್ಯಪ್ಪ ಭಕ್ತರಿಗೆ ಕ್ವಾರಂಟೈನ್:ಶಬರಿಮಲೆಗೆ ತೆರಳಿ ಕೊಡಗಿಗೆ ವಾಪಸಸಾಗುವ ಅಯ್ಯಪ್ಪ ಭಕ್ತರು ಏಳು ದಿನ ಹೋಂ ಕ್ವಾರಂಟೈನ್ ನಲ್ಲಿರಬೇಕು. ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಚಿಕಿತ್ಸೆಗೆ ಒಳಗಾಗಬೇಕು. ಅವರ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಕೂಡಾ ಪರೀಕ್ಷೆಗೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.
ಒಂದೇ ದಿನ 50 ಪ್ರಕರಣ ಪತ್ತೆ: ಕೊಡಗು ಜಿಲ್ಲೆಯಲ್ಲಿ ಬುಧವಾರ ಪೂರ್ವಾಹ್ನ 11ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ 50 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಜಿಲ್ಲೆಯಲ್ಲಿ ಪ್ರಸಕ್ತ 330 ಸಕ್ರಿಯ ಪ್ರಕರಣಗಳಿದ್ದು, ಕಂಟೈನ್‍ಮೆಂಟ್ ವಲಯಗಳ ಸಂಖ್ಯೆ 61ರಷ್ಟಾಗಿದ್ದು, ಪಾಸಿಟಿವಿಟಿ ದರ ಶೇ.2.15ರಷ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಹೇಳಿದ್ದಾರೆ.