ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು
ಕೋವಿಡ್-19 ನಿಯಂತ್ರಣ ಸಂಬಂಧ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಕಾರ್ಯಪಡೆಯನ್ನು ಬಲಪಡಿಸಿ ಪಾಸಿಟಿವಿಟಿ ಪ್ರಮಾಣವನ್ನು ಕಡಿಮೆ ಮಾಡಲು ಶ್ರಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ನಡೆದ ಪರಿಶೀಲನಾ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.
ಕೋವಿಡ್-19 ಮೂರನೇ ಅಲೆ ಸಂಭವಿಸಿದಲ್ಲಿ ಮಕ್ಕಳ ಮೇಲೆ ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಮಾಹಿತಿ ಇರುವ ಹಿನ್ನೆಲೆಯಲ್ಲಿ ಯಾವ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆದ ಉಪ ಲೋಕಾಯುಕ್ತರು, ವೈದ್ಯಾಧಿಕಾರಿಗಳು ಗ್ರಾಮಗಳಿಗೆ ತೆರಳಿ ಲಸಿಕೆಯ ಮಹತ್ವ ಬಗ್ಗೆ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದರು.
ಗ್ರಾಮ ಮಟ್ಟದಲ್ಲಿ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಪಿಡಿಒಗಳು, ಕಂದಾಯ ನಿರೀಕ್ಷಕರು ಹೀಗೆ ಹಲವರು ಗ್ರಾ.ಪಂ.ಕಾರ್ಯಪಡೆ ಜೊತೆಗೆ ತಂಡವಾಗಿ ಕಾರ್ಯನಿರ್ವಹಿಸುವಂತೆ ಅವರು ಹೇಳಿದರು.
ಗ್ರಾ.ಪಂ.ಮಟ್ಟದಲ್ಲಿ ವಾರ್ಡ್ ವಾರು ಕಾರ್ಯಪಡೆಗಳು ಕರ್ತವ್ಯ ನಿರ್ವಹಿಸಬೇಕು. ಕೋವಿಡ್-19 ನ್ನು ಗಂಭೀರವಾಗಿ ಪರಿಗಣಿಸಬೇಕು. ಆ ನಿಟ್ಟಿನಲ್ಲಿ ಶೈಕ್ಷಣಿಕವಾಗಿ ಜಾಗೃತಿ ಮೂಡಿಸುವಂತೆ ವೈದ್ಯಾಧಿಕಾರಿಗಳಿಗೆ ಉಪ ಲೋಕಾಯುಕ್ತರು ನಿರ್ದೇಶನ ನೀಡಿದರು.
ಗ್ರಾಮ ಮಟ್ಟದಲ್ಲಿ ಕೋವಿಡ್-19 ಕಾರ್ಯಪಡೆ ಸಮಿತಿಯು ಇನ್ನಷ್ಟು ಕೆಲಸ ಮಾಡಬೇಕು. ವೈದ್ಯರು ಗ್ರಾಮಗಳಿಗೆ ತೆರಳಿ ಅರಿವು ಮೂಡಿಸಬೇಕು. ಬಡವರು, ದುರ್ಬಲರು, ಕೃಷಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವಂತೆ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳಲ್ಲಿ ಹಾಸಿಗೆಯನ್ನು ಕಾಯ್ದಿರಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದ ಅವರು, ನೆರೆ ರಾಜ್ಯದಿಂದ ಬರುವವರ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಕೋವಿಡ್ ಪರೀಕ್ಷೆ ಮಾಡಬೇಕು. ಜನರಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದರು.
ಕೋವಿಡ್-19 ನಿಯಂತ್ರಣ ಸಂಬಂಧ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಸರ್ಕಾರ ವೇತನ, ಭತ್ಯೆ ಹೀಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕೋವಿಡ್ 19 ಸಂದರ್ಭದಲ್ಲಿಯೂ ನೀಡುತ್ತಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ನಂಬಿಕೆ ಉಳಿಸಿಕೊಂಡು ಶಕ್ತಿ ಮೀರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಸೂಚಿಸಿದರು.’
‘ಕೋವಿಡ್ ನಿಯಂತ್ರಿಸುವಲ್ಲಿ ಗ್ರಾ.ಪಂ.ಕಾರ್ಯಪಡೆಯು ಸೈನಿಕರಂತೆ ಕರ್ತವ್ಯ ನಿರ್ವಹಿಸಬೇಕು. ಕಾರ್ಯಪಡೆಯು ಗ್ರಾಮೀಣ ಜನರ ಬವಣೆಯನ್ನು ನಿವಾರಿಸುವಲ್ಲಿ ಕರ್ತವ್ಯ ನಿರ್ವಹಿಸಬೇಕು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು, ಪಿಡಿಒಗಳು ಈ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಅವರು ಹೇಳಿದರು.’
ಕೋವಿಡ್-19 ಬಗ್ಗೆ ಆರಂಭದಲ್ಲಿಯೇ ಎಚ್ಚರಗೊಂಡರೆ ಜೀವ ಉಳಿಯುತ್ತದೆ. ಇಲ್ಲದಿದ್ದರೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ಕಾರ್ಯಪಡೆ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.