ಹೊಸದಿಗಂತ ಮಂಗಳೂರು :
ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಬೆಳ್ಳೆ ಗ್ರಾಮದ 65 ವರ್ಷದ ವ್ಯಕ್ತಿಯೋರ್ವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಕಾಪು ತಾಲೂಕು ತಹಶಿಲ್ದಾರ್ ಪ್ರತಿಭಾ ಆರ್, ಅವರ ಮನೆಗೆ ಭೇಟಿ ನೀಡಿ ಮನೆಯವರ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದ್ದಾರೆ. ಮನೆಯವರಾರಿಗೂ ಕೋವಿಡ್ ಲಕ್ಷಣಗಳು ಇಲ್ಲವಾಗಿದ್ದು, ತುಸು ನೆಮ್ಮದಿ ನೀಡಿದೆ.
ಮೃತ ದೇಹ ಇನ್ನೂ ಆಸ್ಪತ್ತೆಯಲ್ಲಿಯೇ ಇದ್ದು, ಬುಧವಾರ ಕೋವಿಡ್ SOP ಅನುಸಾರ ಅಂತ್ಯ ಸಂಸ್ಕಾರ ಕೈಗೊಳ್ಳಲು ತಹಶಿಲ್ದಾರ್ ತಿಳಿಸಿದ್ದಾರೆ.
ಪೀಟರ್ ಮಥಾಯಸ್ ಕರುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಮೇ 29 ರಂದು ಹೈಪರ್ ಟೆನ್ಷನ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಕೋವಿಡ್ ಟೆಸ್ಟ್ ಮಾಡಿದಾಗ ಸೋಂಕು ದೃಢಪಟ್ಟಿತ್ತು.
ತಹಶಿಲ್ದಾರ್ ಮತ್ತು ವೈದ್ಯರ ತಂಡ, ಆಶಾ ಕಾರ್ಯಕರ್ತೆ ಎಲ್ಲರೂ ಇಂದು ಮನೆಗೆ ಭೇಟಿ ನೀಡಿ ಊರಿನ ಜನರಿಗೆ ಕೊರೊನ ಮುನ್ನೆಚ್ಚರಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ.
ತಾಲ್ಲೂಕು ವೈದ್ಯಾಧಿಕಾರಿ ವಾಸುದೇವ್, ಶಿರ್ವ ಮೆಡಿಕಲ್ ಆಫೀಸರ್ ಸುಬ್ರಹ್ಮಣ್ಯ, ವೈದ್ಯೆ ವೈಷ್ಣವಿ, ಆಶಾ ಕಾರ್ಯಕರ್ತೆ ಯಶೋದ, ರೆವಿನ್ಯೂ ಇನ್ಸ್‌ಪೆಕ್ಟರ್ ಇಜ್ಜಾರ್ ಸಾಬಿರ್, ಗ್ರಾಮಾಡಳಿತಾಧಿಕಾರಿ ಪ್ರದೀಪ್ ಹಾಜರಿದ್ದರು.