Tuesday, August 9, 2022

Latest Posts

ಕೋವಿಡ್ ಭೀತಿ; ಶ್ರೀ ದೇವೀರಮ್ಮ ಬೆಟ್ಟಕ್ಕೆ ಹತ್ತುವವರ ಸಂಖ್ಯೆ ಕಡಿತ: ಜಿಲ್ಲಾಧಿಕಾರಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಇತಿಹಾಸ ಪ್ರಸಿದ್ಧ ಶ್ರೀ ದೇವೀರಮ್ಮ ಬೆಟ್ಟಕ್ಕೆ ಹತ್ತುವವರ ಸಂಖ್ಯೆಯನ್ನು ಕಡಿಮೆಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಶ್ರೀ ದೇವಿರಮ್ಮ ದೇವಾಲಯದ ದೀಪವಾಳಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಬಿಂಡಿಗ ಶ್ರೀ ದೇವಿರಮ್ಮನವರ ದೀಪೋತ್ಸವ ನವೆಂಬರ್ 3 ರಿಂದ 6 ರವರೆಗೆ ನಡೆಯಲಿದ್ದು, ಕೋವಿಡ್-19ರ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಭಕ್ತಾಧಿಗಳ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ನವೆಂಬರ್ 3 ರಂದು ಶ್ರೀ ದೇವಿರಮ್ಮ ಬೆಟ್ಟಕ್ಕೆ ಹತ್ತುವವರ ಸಂಖ್ಯೆಯನ್ನು ಈ ಬಾರಿ ಕಡಿತಗೊಳಿಸಲಾಗುತ್ತದೆ ಎಂದು ಹೇಳಿದರು.
ಬೆಟ್ಟವು ಅತ್ಯಂತ ಕಡಿದಾಗಿದ್ದು, ಬೆಟ್ಟಕ್ಕೆ ಹತ್ತುವ ಮಾರ್ಗಗಳು ತುಂಬಾ ಕಿರಿದಾಗಿರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವುದರಿಂದ ಬೆಟ್ಟಕ್ಕೆ ಹತ್ತುವ ಈ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯವಿರುವುದರಿಂದ ಬೆಟ್ಟದ ಮೇಲೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳುವುದನ್ನು ತಡೆಹಿಡಿಯಲಾಗಿದೆ ಎಂದ ಅವರು ಇದರಿಂದ ಕೊವೀಡ್ ಸಾಂಕ್ರಾಮಿಕ ರೋಗವು ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂದರು.
ಶ್ರೀ ದೇವಿರಮ್ಮ ಬೆಟ್ಟ ಹತ್ತುವ ಮತ್ತು ದೇವಾಲಯಕ್ಕೆ ಬರುವ ಎಲ್ಲಾ ಭಕ್ತಾಧಿಗಳು, ಸಾರ್ವಜನಿಕರು ರಾಜ್ಯದ ಜನರ ಆರೋಗ್ಯದ ಹಿತದೃಷ್ಠಿಯಿಂದ ಜಿಲ್ಲಾಡಳಿತ ರೂಪಿಸಿರುವ ಕೋವಿಡ್ ನಿಯಮಾವಳಿಯನ್ನು ಪಾಲಿಸಿ, ಮನೆಗೆ ಒಬ್ಬರಂತೆ ಹಾಗೂ ಗ್ರಾಮಕ್ಕೆ ನಿಗಧಿಗೊಳಿಸಲಾದ ಪಾಸ್‌ನೊಂದಿಗೆ ಜನರು ದರ್ಶಣ ಪಡೆಯಬಹುದಾಗಿದೆ ಎಂದು ಹೇಳಿದರು.
ಬೆಟ್ಟಕ್ಕೆ ಜನರು ನಾಲ್ಕು ದಿಕ್ಕುಗಳಿಂದ ಆಗಮಿಸುವ ಸಾಧ್ಯತೆ ಹೆಚ್ಚಿದ್ದು, ಅಂತಹ ಸ್ಥಳಗಳಲ್ಲಿ ಬ್ಯಾರಿಗೇಡ್ ಆಳವಡಿಸಿ ಹೆಚ್ಚು ಜನ ಸೇರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾಣಿಕ್ಯಧಾರದಿಂದ ದರ್ಶನಕ್ಕೆ ಆಗಮಿಸುವುದನ್ನು ಸಂಪೂರ್ಣವಾಗಿ ಬಂದ್ ಮಾಡಿ, ದೇವಿ ದರ್ಶನಕ್ಕೆ ಮಲ್ಲೇನಹಳ್ಳಿ ಮಾರ್ಗದಿಂದ ಮಾತ್ರ ಜನರು ಆಗಮಿಸಲು ಅನುವು ಮಾಡಿಕೊಡಲಾಗುವುದು ಎಂದ ತಿಳಿಸಿದರು.
ಕೋವಿಡ್ ನಿಮಿತ್ತ ಭಕ್ತದಿಗಳಿಗೆ ಜಾತ್ರೆಯಲ್ಲಿ ಯಾವುದೇ ರೀತಿಯ ದೇವಿ ಮೆರವಣಿಗೆಗೆ ಅವಕಾಶವಿರುವುದಿಲ್ಲ ಮತ್ತು ಸಾಮೂಹಿಕ ಊಟದ ವ್ಯವಸ್ಥೆ ನಿಷೇಧಿಸಲಾಗಿರುತ್ತದೆ, ನವೆಂಬರ್ 2 ರಿಂದ 7 ರವೆರೆಗೆ ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಅವರು ಜಾತ್ರೆಗೆ ಬರುವಂತಹ ಭಕ್ತದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಗ್ರಾಮ ಪಂಚಾಯಿತಿ ವತಿಯಿಂದ ಒದಗಿಸುವಂತೆ ಸೂಚಿಸಿದರು.
ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್ ಅಕ್ಷಯ್ ಮಾತನಾಡಿ. ಭಕ್ತಧಿಗಳು ಬೆಟ್ಟ ಹತ್ತುವಾಗ ಯಾವುದೇ ರೀತಿಯ ಅಹಿತಕರ ಘಟನೆಗಳಾಗದಂತೆ ಮುಂಜಾಗೃತ ಕ್ರಮವಾಗಿ ಅಬ್ಯುಲೇನ್ಸ್, ಮೆಡಿಕಲ್ ಟೀಮ್, ಕಿಟ್, ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಮತ್ತು ಆಗ್ನಿಶಾಮಕ ಅಧಿಕಾರಿಗಳಿಗೆ ತಿಳಿಸಿದರು.
ಹೊರ ರಾಜ್ಯದಿಂದ ಬರುವ ಪ್ರವಾಸಿಗರನ್ನು ಜಾತ್ರೆ ನಡೆಯುವ ದಿನಗಳಲ್ಲಿ ನಿಷೇಧಿಸಲಾಗಿದ್ದು ಮತ್ತು ಬೆಟ್ಟದ ಸುತ್ತ-ಮುತ್ತ ಇರುವ ಹೊಂ ಸ್ಟೇ ಗಳಿಗೆ ಪ್ರವಾಸಿಗರು ತಂಗುವುದನ್ನು ನಿರ್ಬಂಧಿಸಲಾಗಿದೆ ಎಂದರು.
ಕೋವಿಡ್‌ನ ಮಾರ್ಗ ಸೂಚಿ ಅನ್ವಯ ಅತ್ಯಂತ ಸರಳವಾಗಿ ದೇವಿರಮ್ಮ ದರ್ಶನ ಪಡೆಯುವಂತೆ ಭಕ್ತಧಿಗಳಲ್ಲಿ ಮನವಿ ಮಾಡಿದ ಅವರು ಕಡ್ಡಾಯ  ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾವಳಿಗಳನ್ನು ಪಾಲಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್ ರೂಪ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಡಾ ಹೆಚ್.ಎಲ್ ನಾಗರಾಜು, ತಹಸೀಲ್ದಾರ್ ಕಾಂತರಾಜ್, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ದೇವಸ್ಥಾನ ಕಮಿಟಿಯವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss