Wednesday, August 17, 2022

Latest Posts

ಕೋವಿಡ್ ನಿಯಂತ್ರಣ ಕಠಿಣ: ಕಾಸರಗೋಡು ಜಿಲ್ಲೆಯಲ್ಲಿ ತಪಾಸಣೆ ಬಿಗಿಗೊಳಿಸಿದ ಪೊಲೀಸರು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದಾರೆ. ಕೊರೋನಾ ಸೋಂಕು ಅಧಿಕಗೊಳ್ಳುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಡಿ ಕ್ಯಾಟಗರಿ ವಲಯದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.
ಅದರಂತೆ ಡಿ ವಲಯದಲ್ಲಿ ಕಟ್ಟುನಿಟ್ಟು ಉಲ್ಲಂಘಿಸುವವರ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗುವುದು. ಗಡಿ ಪ್ರದೇಶಗಳು, ಕಾಲನಿಗಳು, ವ್ಯಾಪಾರ ಸಂಸ್ಥೆಗಳು, ಪಟ್ಟಣಗಳು, ಜನರು ಗುಂಪು ಸೇರುವ ಸಾಧ್ಯತೆಯ ಪ್ರದೇಶಗಳು, ಸಂಸ್ಥೆಗಳು ಇತ್ಯಾದಿ ಕಡೆಗಳಲ್ಲಿ ಬಿಗಿ ತಪಾಸಣೆಯನ್ನು ಏರ್ಪಡಿಸಲಾಗಿದೆ.
ಕೋವಿಡ್ ಟೆಸ್ಟ್ ಪಾಸಿಟಿವಿಟಿ ರೇಟ್ ಕಡಿಮೆಗೊಳಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸಾರ್ವಜನಿಕರು ಸೂಕ್ತ ರೀತಿಯಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮುಂತಾದವುಗಳನ್ನು ಪಾಲಿಸುವಂತೆ ಪೊಲೀಸರು ಹಾಗೂ ಅರೋಗ್ಯ ಇಲಾಖೆಯವರು ಎಚ್ಚರಿಕೆ ವಹಿಸುತ್ತಿದ್ದಾರೆ.
ಮಾಸ್ಕ್ ಧರಿಸದೇ ಸಂಚಾರ: 3512 ಮಂದಿ ವಿರುದ್ಧ ಕೇಸು
ಲಾಕ್ ಡೌನ್ ಮಾನದಂಡಗಳಲ್ಲಿ ಕೊಂಚ ಸಡಿಲಿಕೆ ಜಾರಿಗೊಳಿಸಿದ ಪರಿಣಾಮ ಕಾಸರಗೋಡು ಜಿಲ್ಲೆಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟು ಉಲ್ಲಂಘನೆ ಕೇಸುಗಳೂ ಅತ್ಯಧಿಕಗೊಂಡಿವೆ. ಜು.1ರಿಂದ 6ರ ವರೆಗಿನ ಗಣನೆ ಮಾತ್ರ ಪರಿಶೀಲಿಸಿದರೆ ಈ ವಿಚಾರ ಖಚಿತಗೊಳ್ಳುತ್ತದೆ.
ಈ ಅವಧಿಯಲ್ಲಿ ಮಾಸ್ಕ್ ಧರಿಸದೇ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ 3512 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.
ಪ್ರತಿದಿನ ಈ ಪ್ರಕರಣದಲ್ಲಿ ಸರಾಸರಿ 600 ಮಂದಿ ವಿರುದ್ಧ ಕೇಸು ದಾಖಲಾಗುತ್ತಿದೆ. ಜು.1 ರಂದು 721 ಮಂದಿ ವಿರುದ್ಧ , ಜು.2 ರಂದು 546 ಮಂದಿ ವಿರುದ್ಧ , ಜು.3 ರಂದು 506 ಮಂದಿ ವಿರುದ್ಧ , ಜು.4 ರಂದು 533 ಮಂದಿ ವಿರುದ್ಧ , ಜು.5 ರಂದು 615 ಮಂದಿ ವಿರುದ್ಧ , ಜು.6 ರಂದು 789 ಮಂದಿ ವಿರುದ್ಧ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
ಕೊರೋನಾ ಮಾನದಂಡಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೊಡು ಜಿಲ್ಲೆಯಲ್ಲಿ 43 ಮಂದಿ ವಿರುದ್ಧ ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗಿದೆ. 129 ಮಂದಿಯನ್ನು ಬಂಧಿಸಲಾಗಿದೆ. 12 ವಾಹನಗಳನ್ನು ವಶಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!