ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ಕೊರೋನಾ ಸೋಂಕಿತ ಮಹಿಳೆಯೊಬ್ಬರು ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮೈಸೂರು ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದ ಸವಿತಾ (26) ಮಗುವಿಗೆ ಜನ್ಮ ನೀಡಿದಾಕೆ. ತುಂಬು ಗರ್ಭಿಣಿಯಾಗಿದ್ದ ಈಕೆಗೆ ಕೊರೋನಾ ಸೋಂಕು ತಗುಲಿತ್ತು. ಹೆರಿಗೆ ಬೇನೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಲಾಯಿತು. ಆದರೆ ಆಕೆಗೆ ಕೊರೋನಾ ಸೋಂಕು ಅಂಟಿರುವುದರಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು 108 ಆಂಬುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದರು.
ಇದರಿಂದ ಗಾಬರಿಯಾದ ಆಕೆಯ ಪೋಷಕರು ಆರೋಗ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಂದರು. ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ಕೂಡಲೇ ಸವಿತಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಆದೇಶಿಸಿದರು.
ಈ ಹಿನ್ನಲೆಯಲ್ಲಿ 108 ಆಂಬುಲೆನ್ಸ್ ಸಿಬ್ಬಂದಿಗಳು ಸುರಕ್ಷಿತ ಕವಚವನ್ನು ಧರಿಸಿಕೊಂಡು, ಸವಿತಾರನ್ನು ಮೈಸೂರಿಗೆ ಕರೆದೋಯ್ಯುತ್ತಿದ್ದ ವೇಳೆ, ಮೈಸೂರು ಜಿಲ್ಲೆಯ ಚಿಕ್ಕಳ್ಳಿ ಗ್ರಾಮದ ಬಳಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.
ಬಳಿಕ ತಾಯಿ ಹಾಗೂ ಮಗುವನ್ನು ಮೈಸೂರು ವಿವಿ ಪುರಂ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಈಗ ತಾಯಿ-ಮಗು ಸುರಕ್ಷಿತವಾಗಿದ್ದಾರೆ.